ಬೆಂಗಳೂರು : ವಿದ್ಯಾರ್ಥಿ ಜೀವನ ಪ್ರತಿಯೊಬ್ಬರಿಗೂ ಬಹಳ ಮುಖ್ಯ, ಆತನ ಜೀವನ ನಿರ್ಧರಿಸುವ ಘಟ್ಟ. ಹಾಗಾಗಿ ಕ್ಲಿಷ್ಟಕರ ಪ್ರಶ್ನೆ ಕೇಳಿದ ಮಕ್ಕಳ ತಲೆಗೆ ಬಾರಿಸದೆ, ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬೆಳೆಸಿ. ಅವರಿಗೆ ಉತ್ತೇಜನ ನೀಡಿ ಎಂದು ಶಿಕ್ಷಕ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಗುರುಗಳಿಗೂ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಸಿಎಂ, ನಿಮ್ಮ ಜೊತೆ ಬುದ್ಧಿವಂತಿಕೆಯ ಪೈಪೋಟಿ ಮಾಡಲ್ಲ. ಹೀಗಾಗಿ ಹೃದಯದಿಂದ ಮಾತನಾಡುತ್ತೇನೆ. ನಿಮ್ಮನ್ನೆಲ್ಲ ನೋಡಿದರೆ ನನಗೆ ಕಾಲೇಜು ದಿನಗಳ ನೆನಪಾಗುತ್ತವೆ. ದಟ್ ವಾಸ್ ಎ ಗೋಲ್ಡನ್ ಡೇಸ್. ನೀವು ಕಾಲೇಜು ಕ್ಯಾಂಪಸ್ ನಲ್ಲೇ ಇದ್ದೀರಾ. ನಾವು ಇಂದು ಬದುಕಿನ ಕ್ಯಾಂಪಸ್ ನಲ್ಲಿ ಇದ್ದೇವೆ. ನಮಗೆ ಏನಾದ್ರೂ ಒಂದು ಸ್ವರೂಪ ಸಿಕ್ಕಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಗುರುಗಳು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸಿ : ಮನುಷ್ಯನಿಗೆ ಎರಡು ವಿಚಾರಗಳು ತುಂಬಾ ಸವಾಲಾಗಿರುತ್ತವೆ. ನಾವು ಹುಟ್ಟಿದಾಗಿನಿಂದ ಇಲ್ಲಿವರೆಗೆ ಹೋಲಿಕೆ ಮಾಡಿದರೆ, ನಾವು ನಮ್ಮ ಮುಗ್ದತೆಯನ್ನು ಕಳೆದುಕೊಂಡಿರುತ್ತೇವೆ. ಮಕ್ಕಳಲ್ಲಿ ಮಾತ್ರ ಆ ಮುಗ್ದತೆ ಇರುತ್ತದೆ. ಆ ಮುಗ್ಧತೆಯನ್ನು ಜೀವಂತವಾಗಿ ಇಡುವವರೇ ಶಿಕ್ಷಕರು. ಯಾವುದಾದರೂ ವಿಚಾರದಲ್ಲಿ ಪ್ರಶ್ನೆ ಹಾಕಿ, ಅದಕ್ಕೆ ಉತ್ತರ ಸಿಗದಿದ್ದಾಗ ಪ್ರಶ್ನೆ ಕೇಳಿದ ಮಕ್ಕಳ ತಲೆಗೆ ಹೊಡೆಯಬೇಡಿ. ಪ್ರಶ್ನೆ ಕೇಳುವ ಹಕ್ಕು ಆ ಮಕ್ಕಳಿಗೆ ಇರುತ್ತದೆ. ಇದು ಯಾವಾಗ ಸಫಲವಾಗುತ್ತದೆಯೋ ಆಗ ವಿಕಾಸವಾಗುತ್ತದೆ ಎಂದರು.
ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಸಿಎಂ: ನಿಮ್ಮ ಜೀವನ ಕಷ್ಟ ಇದೆ ಎನ್ನುವುದು ನನಗೆ ಗೊತ್ತು. ನಾನು ಕೂಡ ವಿದ್ಯಾರ್ಥಿಯಾಗಿದ್ದವ. ಬ್ಯಾಕ್ ಬೆಂಚ್ ನಲ್ಲಿ ನಾನು ಕೂರುತ್ತಿದ್ದೆ. ತಮ್ಮ ಕಾಲೇಜು ಜೀವನದ ಪ್ರಿನ್ಸಿಪಾಲ್ ಚಂದ್ರಶೇಖರ್ ಬೆಲ್ಲದ್ ಅವರ ಕಥೆ ಹೇಳಿದ ಸಿಎಂ, ಪ್ರಿನ್ಸಿಪಾಲ್ ತುಂಬಾ ಬುದ್ಧಿವಂತರಾಗಿದ್ದರು. ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ನಾನು ದಾವಣಗೆರೆಗೆ ಹೋಗ್ತಾ ಇದ್ದೇನೆ. ರಾಜಕುಮಾರ್ ಅವರ ಫಸ್ಟ್ ಡೇ ಫಸ್ಟ ಶೋ ಮೂವಿ ನೋಡಲು ಹೋಗುತ್ತಿದ್ದೇನೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದು ಗಣಿತ ಪಾಠ ಮಾಡುತ್ತಿದ್ದರು ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮಾತನಾಡಿ, ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಶಿಕ್ಷಕರದ್ದಾಗಿದೆ. ನಿಮ್ಮ ಕೊಡಗೆಯನ್ನು ಸಾರುವುದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನೀವು ಮಾಡುವ ಸೇವೆಯನ್ನು ಗುರುತಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ. ಕಳೆದ ಬಾರಿ ಬಜೆಟ್ ಗಿಂತ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಹೊಸ ಶಿಕ್ಷಕರ ನೇಮಕಾತಿಯನ್ನು ಮಾಡಲಾಗುತ್ತಿದೆ. ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ರು.
ಭ್ರಷ್ಟಾಚಾರವಿಲ್ಲದೆ ಶಿಕ್ಷಕರ ನೇಮಕಾತಿ : ಭ್ರಷ್ಟಾಚಾರವಿಲ್ಲದೆ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗಿದೆ. ನಮ್ಮ ಸರ್ಕಾರ ವಿವಿಐಪಿ ಕಲ್ಚರ್ ತೆಗೆದುಹಾಕಿದೆ. ನಮ್ಮ ಪರವಾಗಿ ಒಬ್ಬರೇ ಒಬ್ಬರನ್ನೂ ಸಹ ವರ್ಗಾವಣೆ ಮಾಡಿಲ್ಲ. ಎಲ್ಲವೂ ಪಾರದರ್ಶಕವಾಗಿ, ನ್ಯಾಯಯುತವಾಗಿ ನಡೆದಿದೆ. ಎಲ್ಲಾ ವಿಚಾರದಲ್ಲಿ ರಾಜಿ ಆಗದೇ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ 6 ವಿಶ್ವವಿದ್ಯಾಲಯಗಳನ್ನು ಮಾಡಿದ್ದೇವೆ. ಇನ್ನೂ 8 ವಿಶ್ವವಿದ್ಯಾಲಯಗಳನ್ನು ಮಾಡಲಿದ್ದೇವೆ. ಜೊತೆಗೆ 5 ತಿಂಗಳಲ್ಲಿ ಏನೆಲ್ಲ ಸರಿಪಡಿಸಬೇಕೋ ಅದನ್ನು ಸರಿಪಡಿಸುತ್ತೇವೆ ಎಂದರು.
ಇದನ್ನೂ ಓದಿ :ಸಿಇಟಿ ರ್‍ಯಾಂಕಿಂಗ್ ವಿಚಾರ: ಹೈಕೋರ್ಟ್ ತೀರ್ಪು ಕುರಿತು ಕಾನೂನು ತಜ್ಞರ ಜತೆ ಸಚಿವ ಅಶ್ವತ್ಥನಾರಾಯಣ ಚರ್ಚೆ