ಬೆಂಗಳೂರು: ನಾಡು, ನುಡಿ, ಜಲ, ನೆಲದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೃಷ್ಣಾ ಮೇಲ್ದಂಡೆ ಜೊತೆ ಮೇಕೆದಾಟು ಯೋಜನೆಯನ್ನು ಆದಷ್ಟು ಬೇಗ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಜಲ ವಿವಾದ ಇದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಡಿ 5.5 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಮಾಡಬೇಕಿದೆ. ಅದಕ್ಕೆ ಸಣ್ಣ ಕಾನೂನು ಹೋರಾಟದ ಅಗತ್ಯವಿದೆ, ಆ ಮೂಲಕ ಅಲ್ಲಿನ ಭೂಮಿಗೆ ನೀರು ಹರಿಸುವ ಕೆಲಸ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಬೇಕಿದೆ, ಮೇಕೆದಾಟು ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಿ, ಅಗತ್ಯ ಪರವಾನಗಿ ಪಡೆದು ಆದಷ್ಟು ಬೇಗ ಯೋಜನೆ ಆರಂಭ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಹಲವರು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ಹಾಗಾಗಿ ಸ್ವಾತಂತ್ರ್ಯ ಸೇನಾನಿಗಳನ್ನ ಸ್ಮರಿಸುತ್ತೇನೆ. ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿಯವರು, ಸಾಮಾನ್ಯ ಜನರ ಬದುಕಿನಲ್ಲಿ ಚೈತನ್ಯ ತುಂಬಿದ್ದಾರೆ. ಕೃಷಿಕ ಸಮ್ಮಾನ, ಮೆಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹಲವು ಕೊಡುಗೆ ನೀಡಿದ್ದಾರೆ. ಬಹಳ ವರ್ಷಗಳಿಂದ ಆಗಬೇಕಿದ್ದ ಅಭಿವೃದ್ಧಿ 7 ವರ್ಷಗಳಲ್ಲಿ ಆಗಿದೆ. ಇವತ್ತಿಂದ ನವ ಕರ್ನಾಟಕ ನಿರ್ಮಾಣ ಆಗಲಿದೆ. ರೈತರ ಬದುಕಿನಲ್ಲಿ ಕ್ರಾಂತಿ ತರಬೇಕಿದೆ. ರೈತನ ಶ್ರಮ, ಕೂಲಿಕಾರನ ಬೆವರಿಗೆ ಬೆಲೆ ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲಾ ಕಾರ್ಯಕ್ರಮ ಇರಲಿವೆ. ಕೃಷಿ ವಲಯದಲ್ಲಿ ಶೇ. 1 ಅಭಿವೃದ್ಧಿ ಆದರೆ ಸೇವಾ ವಲಯದಲ್ಲಿ ಶೇ. 10, ಉತ್ಪಾದಕ ವಲಯದಲ್ಲಿ ಶೇ. 4 ರಷ್ಟು ಅಭಿವೃದ್ಧಿ ಆಗಲಿದೆ. ಹಾಗಾಗಿ ಕೃಷಿಗೆ ಆದ್ಯತೆ ನೀಡುವ ಘೋಷಣೆ ಮಾಡಿದರು.
ರಾಜ್ಯವನ್ನು ಮುನ್ನಡೆಸುವ ಕಡೆ ಗಮನವಿಟ್ಟುಕೊಂಡು ಬೇಕಾದ ನೀತಿ, ಕಾರ್ಯಕ್ರಮಗಳನ್ನು ರೂಪಿಸಿ, ಅವು ಜನರ ಮನೆ ಬಾಗಿಲಿಗೆ ಮುಟ್ಟುವ ಕೆಲಸ ಮಾಡಲಿದ್ದೇವೆ. ಕೊನೆಯ ಹಂತದವರೆಗೂ ಜನರ ಬದುಕು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತೇವೆ. ಕನ್ನಡ ನಾಡಿನ ಕಟ್ಟ ಕಡೆಯ ಕುಟುಂಬ, ದೀನ ದಲಿತ, ಅಲ್ಪಸಂಖ್ಯಾತ ಸೇರಿದಂತೆ ಪ್ರತಿಯೊಬ್ಬರ ಬದುಕು ಹಸನಾಬೇಕು. ಸುಖ, ಶಾಂತಿ ನೆಮ್ಮದಿಯ ಬದುಕು ಎಲ್ಲರಿಗೂ ಸಿಗಬೇಕು ಎನ್ನುವ ಧ್ಯೇಯವಿರಿಸಿಕೊಂಡು ಕೆಲಸ ಮಾಡುತ್ತೇವೆ. ನಮಗೆ 20 ತಿಂಗಳು ಮಾತ್ರ ಅವಕಾಶವಿದೆ. ಅಷ್ಟರಲ್ಲಿ ದೀರ್ಘಾವಧಿ, ಅಲ್ಪಾವಧಿಯ ಯೋಜನೆ ಮಾಡಲಿದ್ದೇವೆ. ಅಲ್ಪಾವಧಿ ಯೋಜನೆ ಶೇ. 100 ರಷ್ಟು ಅನುಷ್ಠಾನಕ್ಕೆ ತರುವ ಭರವಸೆ ನೀಡುತ್ತೇನೆ ಎಂದರು.