ಬೆಂಗಳೂರು: ಅಲ್ಪಸಂಖ್ಯಾತರು ಹೆಚ್ಚಾಗಿ ವಾಸವಿರುವ ಪ್ರದೇಶಗಳ ಅಭಿವೃದ್ಧಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯು ಟಿ ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಅಲ್ಪಸಂಖ್ಯಾತರು ವಾಸವಿರುವ ಹೆಚ್ಚಿನ ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಿ, ಕೊಳಗೇರಿ ಅಭಿವೃದ್ಧಿ ನಿಗಮದಿಂದ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ಒದಗಿಸಲಾಗಿದೆ ಎಂದರು.
ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಯಾವ ಪ್ರದೇಶವನ್ನು ಸ್ಲಂಗಳನ್ನಾಗಿ ಗುರುತಿಸಿ ಘೋಷಿಸುವ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೊದಲ ಹಂತದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರಿರುವ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2ನೇ ಹಂತದಲ್ಲಿ ಅಲ್ಪಸಂಖ್ಯಾತರು ಮತ್ತು ಇತರರಿರುವ ಅಭಿವೃದ್ಧಿ ಕಾರ್ಯಗಳ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಲ್ಪಸಂಖ್ಯಾತರು ವಾಸವಿರುವ ಕಾಲೋನಿಗಳ ಅಭಿವೃದ್ಧಿಯನ್ನು ಕೇಂದ್ರದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಕೇಂದ್ರ ಒದಗಿಸುವ ಈ ಅನುದಾನ ಬೆಂಗಳೂರು ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾತ್ರ ಬಳಕೆ ಮಾಡಲು ಅವಕಾಶವಿದೆ.
ಹಾಗಾಗಿ, ಕೊಳಗೇರಿ ಮಂಡಳಿಯಿಂದ ಉಳಿದ ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳ ಅಭಿವೃದ್ಧಿ ನಡೆಸಲಾಗುತ್ತಿದೆ ಎಂದರು. ಕಳೆದ ವರ್ಷ ಮಂಗಳೂರಿನ ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳಿಗೆ ಸುಮಾರು 10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.