ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಸಮಾನ ವೇತನ ಪರಿಷ್ಕರಿಸಲು ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ - ಏಳನೇ ವೇತನ ಆಯೋಗ ರಚಿಸುವ ಬಗ್ಗೆ ಮಹತ್ವದ ಘೋಷಣೆ

ಸಿಎಂ ಬೊಮ್ಮಾಯಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಏಳನೇ ವೇತನ ಆಯೋಗ ರಚಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನಾಂತರವಾಗಿ ರಾಜ್ಯ ಸರ್ಕಾರಿ ನೌಕರರ ವೇತನ‌ ಪರಿಷ್ಕರಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Mar 16, 2022, 5:25 PM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹು ಬೇಡಿಕೆಯ ಕೇಂದ್ರ ಸರ್ಕಾರಿ ನೌಕರರ ಸಮಾನಾಂತರ ವೇತನ ಪರಿಷ್ಕರಿಸಲು ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ಸಲ್ಲಿಸಲು ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು ಎಂದು ಹೇಳಿದರು.

ತಮ್ಮ ಬಜೆಟ್​​ನಲ್ಲೇ ಈ ಸಂಬಂಧ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಸಿಎಂ ಏಳನೇ ವೇತನ ಆಯೋಗ ರಚಿಸುವ ಬಗ್ಗೆ ಪ್ರಸ್ತಾಪಿಸದೇ ಇರುವುದು ಸರ್ಕಾರಿ ನೌಕರರಿಗೆ ತೀವ್ರ ನಿರಾಶೆ ತಂದಿತ್ತು.‌ ಇತ್ತ ಮಾಜಿ ಸಿಎಂ ಯಡಿಯೂರಪ್ಪ ಅವರೂ ಬಜೆಟ್ ಮುನ್ನ ಸಿಎಂಗೆ ಪತ್ರ ಬರೆದು ಏಳನೇ ವೇತನ ಆಯೋಗ ಶಿಫಾರಸು ಅನುಷ್ಠಾನ ಸಂಬಂಧ ಸಮಿತಿ ರಚಿಸುವಂತೆ ಮನವಿ ಮಾಡಿದ್ದರು. ಆದರೆ, ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಘೋಷಣೆ ಮಾಡಿರಲಿಲ್ಲ.

ಇದೀಗ ಸಿಎಂ ಬೊಮ್ಮಾಯಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಏಳನೇ ವೇತನ ಆಯೋಗ ರಚಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಸಮಾನಾಂತರ ರಾಜ್ಯ ಸರ್ಕಾರಿ ನೌಕರರ ವೇತನ‌ ಪರಿಷ್ಕರಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಬಳಿಕ ಮಾತು ಮುಂದುವರಿಸಿದ ಸಿಎಂ ಬೊಮ್ಮಾಯಿ, ಹೆಚ್ .ಕೆ ಪಾಟೀಲ್ ರು ಸರ್ಕಾರಿ ನೌಕರರ ವೇತನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಮೂರುವರೇ ಲಕ್ಷ ಹುದ್ದೆಗಳು ಖಾಲಿ ಇರುತ್ತವೆ. ನಾಲ್ಕೂವರೆ ಲಕ್ಷ ಹುದ್ದೆಗಳು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ. ಆದರೆ ಒಟ್ಟು ಖಾಲಿ ಹುದ್ದೆಗಳು 2,58,709. ಗುತ್ತಿಗೆ ಮತ್ತು ಹೊರಗುತ್ತಿಗೆ 91 ಸಾವಿರ ಮಾತ್ರ ಇವೆ. 91 ಸಾವಿರದಲ್ಲಿ 77 ಸಾವಿರ ಅನ್ ಸ್ಕಿಲ್ಡ್ ಗ್ರೂಪ್ ಡಿ ಇದೆ. ಡ್ರೈವರ್, ಟೈಪಿಸ್ಟ್ ಎಲ್ಲರೂ ಇದ್ದಾರೆ. ಆದ್ದರಿಂದ ಅವರು ಹೇಳಿದ ಅಂಕಿ ಅಂಶಗಳು ಸರಿಯಿಲ್ಲ. ದೊಡ್ಡ ಪ್ರಮಾಣದಲ್ಲಿ ಹೊರಗುತ್ತಿಗೆ ಇಲ್ಲ. ಇಷ್ಟು ಇದ್ದರೂ ಸರ್ಕಾರಿ ನೌಕರರು ಅವರ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಹುದ್ದೆಗಳು ಖಾಲಿ ಇದ್ದಾಗಲೂ ಅವರು ಕೆಲಸ ಮಾಡುತ್ತಾ ಬಂದಿದ್ದಾರೆ. ಮೊದಲಿಂದ ಖಾಲಿ ಉಳಿಯುತ್ತಾ ಬಂದಿವೆ ಎಂದು ಸ್ಪಷ್ಟನೆ ನೀಡಿದರು.

ಹೊರಗುತ್ತಿಗೆ ನಿಲ್ಲಿಸುವುದು ಒಳಿತು:ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಹೆಚ್ಚು ಮಾಡುತ್ತಾ ಹೋದರೇ ಮೀಸಲಾತಿ ಅಳವಡಿಸಲು ಆಗಲ್ಲ. ಎಸ್​​​ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತ ಮೀಸಲಾತಿ, ಕೆಟಗರಿ 1,2,3 ಇದರ ಪ್ರಕಾರ ಮೀಸಲಾತಿಯಿಂದ ವಂಚಿತರಾಗುತ್ತಾರೆ. ನಮ್ಮ ಕಾಲದಲ್ಲೂ ಇತ್ತು ಅದು ಬೇರೆ ವಿಚಾರ. ಆದರೆ ಇದನ್ನೇ ನೀವು ಮುಂದುವರಿಸುತ್ತಾ ಹೋದರೆ ಮೀಸಲಾತಿ ಇರಲ್ಲ. ಹೊರಗುತ್ತಿಗೆ ಮಾಡುವುದರಲ್ಲಿ ಮೀಸಲಾತಿ ಇರುವುದಿಲ್ಲ. ರಾಜ್ಯದ ಜನರ ಖರ್ಚು ಆಗುತ್ತದೆ, ಯಾಕೆಂದರೆ ಅವರಿಗೆ ಸಂಬಳ ಕೊಡಬೇಕಲ್ಲ. ಯಾವನೋ ಕಾಂಟ್ರಾಕ್ಟರ್ ಇರ್ತಾನೆ, ಅವನ ಸಂಬಳ ಹೆಚ್ಚು ಮಾಡಿಕೊಳ್ಳುತ್ತಾನೆ. ಪಾಪ ಕೆಲಸಗಾರರಿಗೆ ಸಂಬಳ ಸಿಗಲ್ಲ. ಮೀಸಲಾತಿ ಇರುವುದಿಲ್ಲ, ಸಮಾನ ಕೆಲಸ, ಸಮಾನ ವೇತನ ಸಿಗುವುದಿಲ್ಲ. ಹಾಗಾಗಿ ಹೊರಗುತ್ತಿಗೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details