ಬೆಂಗಳೂರು:ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದು, ಈಶ್ವರಪ್ಪ ಹೇಳದಿರುವ ಮಾತುಗಳನ್ನು ಸೇರಿಸಿಕೊಂಡು ಮಾಡುತ್ತಿರುವ ಧರಣಿಯನ್ನು ಜನ ಒಪ್ಪಲ್ಲ, ನೀವು ಇದನ್ನೇ ಇಟ್ಟುಕೊಂಡು ಜನರ ಮುಂದೆ ಬನ್ನಿ, ನಾವೂ ಬರುತ್ತೇವೆ ಜನರೇ ತೀರ್ಮಾನಿಸಲಿ ಎಂದು ಸವಾಲು ಹಾಕಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ವಂದನಾ ನಿರ್ಣಯ ಕುರಿತು ಚರ್ಚೆಯಲ್ಲಿ ಪ್ರತಿಪಕ್ಷ ಭಾಗಿಯಾಗಲಿಲ್ಲ, ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿಲ್ಲ, ಚರ್ಚೆ ಇಲ್ಲದೇ ಉತ್ತರ ನೀಡಬೇಕಾದ ಘಟನೆ ನಡೆದಿದೆ, ಚರ್ಚೆಯಿಂದ ದೂರ ಉಳಿದು ಪ್ರತಿಪಕ್ಷ ಜವಾಬ್ದಾರಿ ಮರೆತಿದ್ದು, ಕಪ್ಪುಚುಕ್ಕೆಯಾಗಿದೆ. ಪೂರ್ಣ ಪ್ರಮಾಣದ ಚರ್ಚೆ ಆಗಬೇಕಾಗಿತ್ತು, ಆದರೆ ಆಗಲಿಲ್ಲ. ಕಳೆದ ಒಂದು ವರ್ಷ ಸಾಧನೆ ಹೇಳಿದಾಗ ನ್ಯೂನತೆ ಹೇಳುವ ಅವಕಾಶವನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ ಎಂದು ಟೀಕಿಸಿದರು.
ಸರ್ಕಾರವನ್ನು ಸಮರ್ಥಿಸಿಕೊಂಡ ಸಿಎಂ:ಕೋವಿಡ್ ಮಹಾಮಾರಿ ನಮ್ಮೆಲ್ಲರನ್ನು ದಿಗ್ಭ್ರಮೆಗೊಳಗಾಗುವಂತೆ ಮಾಡಿತ್ತು. ನಮ್ಮ ಬದುಕನ್ನು ತಡೆಗಟ್ಟುವ ಕೆಲಸ ಆಯಿತು. ಇಂತಹ ಸಂದರ್ಭದಲ್ಲಿ ಹಿಂದಿನ ಸಿಎಂ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದರು. ಹಲವಾರು ಸಭೆ ನಡೆಸಿ ಎಲ್ಲರನ್ನು ವಿಶ್ವಾಸ ಪಡೆದು ಕೆಲಸ ಮಾಡಿದರು. ಎರಡು ಸಾವಿರ ಕೋಟಿಗೂ ಹೆಚ್ಚು ಹಣ ನೀಡಿದರು. ನಮ್ಮ ಆರೋಗ್ಯ ವ್ಯವಸ್ಥೆ ಅಷ್ಟು ವ್ಯವಸ್ಥಿತವಾಗಿರದೇ ಇದ್ದರೂ ತುರ್ತಾಗಿ ವ್ಯವಸ್ಥೆ ಮಾಡಿಕೊಂಡು ಮೂಲಸೌಕರ್ಯ, ಅಗತ್ಯ ಸಿದ್ದತೆ, ಐಸಿಯು, ಔಷಧ ಇತ್ಯಾದಿ ವ್ಯವಸ್ಥೆ ಕಲ್ಪಿಸಿದೆವು.
ಪ್ರಥಮ ಹಂತದಲ್ಲಿ ನಾವು ವೈರಾಣು ಬಗ್ಗೆ ಮಾಹಿತಿ ಇಲ್ಲದೆ ಸಾಕಷ್ಟು ಜನರನ್ನು ಕಳೆದುಕೊಳ್ಳಬೇಕಾಯಿತು. ಅಂತವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ, ಕೇಂದ್ರ 50 ಸಾವಿರ ಪರಿಹಾರ ನೀಡಿತು. ಬೀದಿಬದಿ ವ್ಯಾಪಾರಿ ಸೇರಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ಕಲ್ಪಿಸಲಾಯಿತು. ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆ ಆಗಿತ್ತು, ಅದು ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಿದೆವು, ಶವಸಂಸ್ಕಾರದವರೆಗೂ ನಾವು ಕೋವಿಡ್ ನಿಯಂತ್ರಣ ಮಾಡಿದ್ದೇವೆ, 7-8 ತಿಂಗಳು ಕೋವಿಡ್ ಇದ್ದರೂ ನಾವು ಆರ್ಥಿಕತೆ ಮುನ್ನಡೆಸಿದ್ದೇವೆ, ಹಲವಾರು ಕ್ರಮ ಕೈಗೊಂಡಿದ್ದೇವೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಮತ್ತೊಂದು ಕಡೆ ಕಳೆದ ಬಾರಿ ಎರಡು ದೊಡ್ಡ ಪ್ರವಾಹ ಬಂತು, ನವೆಂಬರ್ ವರೆಗೂ ದೊಡ್ಡ ಮಳೆ ಬಂದಿತು. ಬೆಳೆ ನಾಶವಾಯಿತು. ಮನೆಹಾನಿಗೆ ಅನುದಾನ ಕೊಟ್ಟಿದ್ದೇವೆ, ವಿಪತ್ತು ನಿರ್ವಹಣೆ ಕಾಯ್ದೆಯಲ್ಲಿನ ಅವಕಾಶದಂತೆ ಪರಿಹಾರ ಕೊಡಲಾಗಿದೆ. ಒಣ ಬೇಸಾಯ, ನೀರಾವರಿ, ತೋಟಗಾರಿಕೆ ಬೆಳೆಗಳ ಹಾನಿಗೆ ಪರಿಹಾರ ನೀಡಿದ್ದೇವೆ, ಇಷ್ಟೆಲ್ಲ ಸಮಸ್ಯೆ ನಡುವೆಯೂ ನಾವು ಅಭಿವೃದ್ಧಿ ಮರೆತಿಲ್ಲ, ರೈತರ ಮಕ್ಕಳಿಗೆ ವಿದ್ಯಾನಿಧಿ ಸ್ಥಾಪನೆ ಮಾಡಿದ್ದೇವೆ. 4.52 ಲಕ್ಷ ರೈತ ಮಕ್ಕಳಿಗೆ ವಿದ್ಯಾನಿಧಿ ಹೋಗಿದೆ, ಕಾರ್ಮಿಕ ಕಲ್ಯಾಣಕ್ಕಾಗಿ ಕ್ರಮ ಕೈಗೊಂಡಿದ್ದೇವೆ, ವಿದೇಶಿ ಬಂಡವಾಳ ಹರಿದುಬರುತ್ತಿದೆ, ಕೃಷಿ, ಕೈಗಾರಿಕೆಯಲ್ಲಿ ಪ್ರಗತಿ ಸಾಧಿಸುವುದು ನಮ್ಮ ಇಚ್ಚಾಶಕ್ತಿಯಾಗಿದೆ ಎಂದರು.
ನಗರ ಪ್ರದೇಶದ ಮೂಲಸೌಕರ್ಯಕ್ಕೆ ಅನುದಾನ ನೀಡಲಾಗಿದೆ, 31,627 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮಾಡಿದ್ದೇವೆ, ಪಿಂಚಣಿಗಳನ್ನು ಹೆಚ್ಚಿಗೆ ಮಾಡಿ 58 ಲಕ್ಷ ಕುಟುಂಬಕ್ಕೆ ಸಹಾಯ ಮಾಡಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ, ಮಹಿಳಾ ಸಬಲೀಕರಣಕ್ಕೆ ಮೂಲ ಬಂಡವಾಳ ಕೊಡಲಾಗಿದೆ. 5 ಲಕ್ಷ ಮನೆಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. 48 ಸಾವಿರ ಮನೆ ಕಟ್ಟಿ ಮುಗಿಸಲಾಗಿದೆ. ಅಮೃತ ಮಹೋತ್ಸವದಲ್ಲಿ 750 ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ.
ಅಮೃತ ನಿರ್ಮಲ ಯೋಜನೆ, ಶಾಲೆ, ಅಂಗನಾಡಿ ಅಭಿವೃದ್ಧಿ, ಒಲಂಪಿಕ್ ಗಾಗಿ ಕ್ರೀಡಾಪಟುಗಳ ದತ್ತುಪಡೆಯುವ ಯೋಜನೆ, ಪ್ರತಿ ಪಂಚಾಯತ್ನಲ್ಲಿ ಗ್ರಾಮ ಒನ್ ಯೋಜನೆ ಜಾರಿ, ಲೋಕೋಪಯೋಗಿ ಇಲಾಖೆ ಅಡಿ ನಾಲ್ಕನೇ ಹಂತದ ರಾಜ್ಯ ಹೆದ್ದಾರಿ ಸಂಪೂರ್ಣ ಅಭಿವೃದ್ಧಿ ಆಗಲಿದೆ.