ಬೆಂಗಳೂರು: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣೆ ಸಮಿತಿ ಸದಸ್ಯ ಸ್ಥಾನ ಸಿಕ್ಕಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಕುರ್ಚಿ ಹೆಚ್ಚು ಭದ್ರವಾದಂತಾಗಿದೆ.
ಬಿಜೆಪಿಯಲ್ಲಿ ಒಂದು ಗುಂಪು ಸಿಎಂ ಬಸವರಾಜ ಬೊಮ್ಮಾಯಿವರನ್ನು ಬದಲಿಸುವಂತೆ ಪಕ್ಷದ ಹೈಕಮಾಂಡ್ ಮೇಲೆ ಹಲವಾರು ತಿಂಗಳುಗಳಿಂದ ಒತ್ತಡ ಹೇರುತ್ತಲೇ ಬರತೊಡಗಿದೆ. ಈ ಕ್ಷಣಕ್ಕೂ ಸಿಎಂ ಹುದ್ದೆಗೆ ತೆರೆ ಮರೆಯಲ್ಲಿ ಸಿಎಂ ಕುರ್ಚಿಯ ಆಕಾಂಕ್ಷಿಗಳಿಂದ ಲಾಬಿ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ನೇಮಕ ಮತ್ತು ಬದಲಾವಣೆ ನಿರ್ಧರಿಸುವ ಬಿಜೆಪಿ ಸಂಸದೀಯ ಮಂಡಳಿಗೆ ಯಡಿಯೂರಪ್ಪನವರೇ ನೇಮಕವಾಗಿದ್ದರಿಂದ ಬಸವರಾಜ ಬೊಮ್ಮಾಯಿಗೆ ಆನೆ ಬಲ ಬಂದಂತಾಗಿದೆ.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ನಂತರ ಅವರ ಸಲಹೆಯಂತೆಯೇ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಬೊಮ್ಮಾಯಿಯವರು ಯಡಿಯೂರಪ್ಪನವರ ಶಿಷ್ಯರೆಂದು ಗುರುತಿಸಿಕೊಂಡಿದ್ದರಿಂದ ಸಿಎಂ ಬದಲಾವಣೆ ಮುಖ್ಯಮಂತ್ರಿ ಆಕಾಂಕ್ಷಿಗಳು ಅಂದುಕೊಂಡಷ್ಟು ಸುಲಭವಾಗಿಲ್ಲ.
ಮುಗಿದ ಅಧ್ಯಾಯ: ಸಿಎಂ ಬದಲಿಸುವ ಬಗ್ಗೆ ಈಗಾಗಲೇ ಯಡಿಯೂರಪ್ಪನವರು ಅದು ಮುಗಿದ ಅಧ್ಯಾಯ. ವಿಧಾನಸಭೆ ಚುನಾವಣೆಗೆ ಕೇವಲ 8 ತಿಂಗಳು ಬಾಕಿ ಇರುವಾಗ ಮುಖ್ಯಮಂತ್ರಿ ಬದಲಾವಣೆ ಒಳ್ಳೆಯ ನಿರ್ಧಾರವಾಗಲಾರದು. ಅದರಿಂದ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎನ್ನುವ ತಮ್ಮ ಖಚಿತ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ಗೆ ಈಗಾಗಲೇ ತಿಳಿಸಿದ್ದಾರೆನ್ನಲಾಗಿದೆ. ಒಂದು ವೇಳೆ ಸಂಸದೀಯ ಮಂಡಳಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಬಂದರೆ ಬಿಎಸ್ವೈ ಅವರು ಬೊಮ್ಮಾಯಿ ಪರವೇ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೊಮ್ಮಾಯಿ ನೆಮ್ಮದಿಯಿಂದಿರಬಹುದಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ ಇಲ್ಲ. ಹೊಸ ಮುಖ್ಯಮಂತ್ರಿ ನೇಮಕ ಸುದ್ದಿ ಊಹಾಪೋಹದ್ದಾಗಿದೆ. ಪೂರ್ಣಾವಧಿ ತನಕ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆಂದು ಯಡಿಯೂರಪ್ಪನವರು ಮಾಧ್ಯಮಗಳ ಮುಂದೆ ಸಹ ಹಲವು ಬಾರಿ ಖಚಿತಪಡಿಸಿದ್ದಾರೆ. ಇದು ಸಿಎಂ ಬೊಮ್ಮಾಯಿಗೆ ಯಡಿಯೂರಪ್ಪ ನವರ ಬೆಂಬಲ ಇರುವುದನ್ನು ಸ್ಪಷ್ಟಪಡಿಸುತ್ತದೆ.