ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಣಮುಖರಾಗಿದ್ದಾರೆ. ಆಗಸ್ಟ್ 6ರಂದು ಕೋವಿಡ್ ಪಾಸಿಟಿವ್ ಬಂದಿದ್ದರಿಂದ ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ ಆಗಿದ್ದ ಸಿಎಂ ಇಂದು ಗುಣಮುಖರಾಗಿದ್ದು, ನಾಳೆ ಮೈಸೂರು, ಮಂಡ್ಯ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಕೋವಿಡ್ ಸೋಂಕಿನಿಂದಾಗಿ ಕಳೆದ ನಾಲ್ಕು ದಿನದಿಂದ ನಿವಾಸದಿಂದಲೇ ಸಿಎಂ ವರ್ಚುವಲ್ ಸಭೆಗಳನ್ನು ನಡೆಸಿದ್ದರು. ಈಗ ಕೋವಿಡ್ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಣಿಯಾಗಿದ್ಧಾರೆ. ನಾಳೆ ಬೆಳಗ್ಗೆ 9.30 ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳುತ್ತಿದ್ದಾರೆ.
10.40ಕ್ಕೆ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿರುವ ಯುವಜನ ಮಹೋತ್ಸದ ಹಾಗೂ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, 11.15ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಮಧ್ಯಾಹ್ನ 12.45ಕ್ಕೆ ಮೈಸೂರಿನಿಂದ ರಸ್ತೆ ಮಾರ್ಗದ ಮೂಲಕ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳಲಿದ್ಧಾರೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ-ಕೆಎಸ್ಆರ್ಎಲ್ಪಿಎಸ್ ಸಂಸ್ಥೆಯ ಜೀವನೋಪಾಯ ವರ್ಷಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂಜೆ 4.15ಕ್ಕೆ ಮದ್ದೂರು ತಾಲೂಕಿನಲ್ಲಿ ಭಾರತೀ ಎಜುಕೇಶನ್ ಟ್ರಸ್ಟ್ ಆಯೋಜಿಸಿರುವ ಭಾರತಿ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಸಂಜೆ 7 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಇದನ್ನೂ ಓದಿ:ಸಿಎಂ ಬದಲಿಲ್ಲ, ನನ್ನ ರಾಜ್ಯಾಧ್ಯಕ್ಷ ಸ್ಥಾನದ ಅವಧಿಯೂ ಮುಗಿದಿಲ್ಲ ಎಂದ ಕಟೀಲ್