ಸವದಿ ರಾಜೀನಾಮೆ ವಿಚಾರ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಬೆಂಗಳೂರು: ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಪಕ್ಷದಲ್ಲಿ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಟಿಕೆಟ್ ಕೈ ತಪ್ಪಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು. ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ನಾಯಕರು ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನೂ ಮನವೊಲಿಸಲಿದ್ದು ಎಲ್ಲವೂ ಸರಿಯಾಗಲಿದೆ. ಎಲ್ಲ ಅಸಮಾಧಾನಿತರ ಜತೆಗೂ ಮಾತುಕತೆ ನಡೆಸಲಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸವದಿ ಕಡೆಗಣನೆ ಪ್ರಶ್ನೆಯೇ ಇಲ್ಲ: 189 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಬಹುತೇಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದಿಂದ ಸ್ವಾಗತ ಮಾಡಲಾಗಿದೆ. ಆದರೆ, ಕೆಲ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದು, ನನ್ನನ್ನು ಬಂದು ಭೇಟಿಯಾಗುತ್ತಿದ್ದಾರೆ. ನಾನು ಕೂಡ ಹಲವರ ಜತೆ ಸಂಪರ್ಕದಲ್ಲಿದ್ದೇನೆ. ಲಕ್ಷ್ಮಣ ಸವದಿ ಜತೆ ಮಾತನಾಡಿದ್ದೇನೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದಿದ್ದೇನೆ. ಸವದಿ ಅವರಿಗೆ ಬಿಜೆಪಿ ಜತೆ ಹಳೆಯ ನಂಟು, ಸಂಬಂಧ, ಪ್ರೀತಿ, ವಿಶ್ವಾಸವಿದೆ.
ಭಾವನಾತ್ಮಕ ಸಂಬಂಧವಿದೆ. ಟಿಕೆಟ್ ಸಿಗದಿರುವ ಬೇಜಾರಿದೆ ಎನ್ನುವುದು ನಿಜ. ಹೈಕಮಾಂಡ್ ಕೂಡ ಮಾತನಾಡಲಿದೆ ನಾನೂ ನಿರಂತರವಾಗಿ ಅವರೊಂದಿಗೆ ಮಾತನಾಡುತ್ತಿದ್ದೇನೆ. ಅವರು ನೋವಿನಲ್ಲಿ ಕೆಲ ವಿಚಾರಗಳನ್ನು ಹೇಳಿರಬಹುದು. ಶಾಂತವಾಗಿ ಕುಳಿತು ಯೋಚಿಸಿದರೆ ಅವರಿಗೆ ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ ಎನ್ನುವುದು ಸ್ಪಷ್ಟವಾಗಲಿದೆ. ಈ ಹಿಂದೆ ಪಕ್ಷ ಅವರ ಕೈ ಹಿಡಿದಿದೆ. ಇಂದೂ ಕೂಡ ಅವರ ಕೈ ಹಿಡಿಯಲಿದೆ. ಈ ಸಂದರ್ಭದಲ್ಲಿ ಸರ್ಕಾರ ರಚನೆ ವೇಳೆ ಮಾತು ಕೊಟ್ಟಂತೆ ನಡೆಯಬೇಕು. ಅದಕ್ಕಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದೆ. ಹಾಗಂತ ಸವದಿ ಕಡೆಗಣನೆ ಪ್ರಶ್ನೆಯೇ ಇಲ್ಲ. ಅವರ ಗೌರವ ಕಾಪಾಡಲು ಹೈಕಮಾಂಡ್ ಜತೆಗೂ ಮಾತುಕತೆ ನಡೆಸಲಿದ್ದೇನೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಹೈಕಮಾಂಡ್ ಭೇಟಿಗೆ ತೆರಳಿದ್ದು ಅಲ್ಲಿಯೇ ಮಾತುಕತೆ ನಡೆಯಲಿದೆ. ಎಲ್ಲವೂ ಸರಿಯಾಗಲಿದೆ. ಆರ್ ಶಂಕರ್ ಜತೆಗೂ ಮಾತುಕತೆ ನಡೆಸುತ್ತೇವೆ. ಈಗಾಗಲೇ ಪತ್ರನಿಗೆ ಟಿಕೆಟ್ ಕೇಳಿದ್ದ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ನೀವೇ ಸ್ಪರ್ಧೆ ಮಾಡಿ ಎಂದು ಅವರ ಜೊತೆ ಮಾತನಾಡಿ ಸ್ಪರ್ಧೆಗೆ ಮನವೊಲಿಕೆ ಮಾಡಿದ್ದೇವೆ ಎಂದರು.
ಸವದಿ ಹೇಳಿಕೆ ಸತ್ಯಕ್ಕೆ ದೂರ: ಬಿಜೆಪಿ ಸೇರುವ ಮುನ್ನ ಜನತಾಪರಿವಾರ ತೊರೆಯುವ ಸಂದರ್ಭದಲ್ಲಿ ಬೊಮ್ಮಾಯಿ ಕಾಂಗ್ರೆಸ್ಗೆ ಸೇರಲು ಮುಂದಾಗಿದ್ದರು ಎನ್ನುವ ಸವದಿ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ. ಅಂದು ನಾನು ನಮ್ಮ ಮನೆಯಲ್ಲಿ ಕುಳಿತಿದ್ದೆ. ಯಾವುದೇ ಪಕ್ಷಕ್ಕೂ ಹೋಗಿರಲಿಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ಬಂದು ಮೊದಲು ಮಾತನಾಡಿದ್ದರು. ನಂತರ ಸವದಿ, ಸಿ.ಸಿ ಪಾಟೀಲ್, ಅಶೋಕ್ ಬಂದಿದ್ದು ನಿಜ. ಎಲ್ಲರೂ ಸ್ನೇಹಿತರೇ ಎಂದು ಸಿಎಂ ಸ್ಪಷ್ಟೀಕರಣ ನೀಡಿದರು.
ನಾನು ಸ್ಥಿತ ಪ್ರಜ್ಞ: ಬಸವರಾಜ ಬೊಮ್ಮಾಯಿ ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆ. ಮೋದಿ ನಂತರ ಪ್ರಧಾನಿಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಅಲ್ಲಗಳೆದ ಸಿಎಂ, ಮೋದಿ ನಂತರ ಬೊಮ್ಮಾಯಿ ಪಿಎಂ ಎನ್ನುವುದು ಅಪ್ರಸ್ತುತ. ಮುಂದೆ ನಾನು ಏನಾಗುತ್ತೇನೆ ಎನ್ನುವ ಭವಿಷ್ಯ ಯಾರ ಕೈಯಲ್ಲೂ ಇಲ್ಲ. ಅಂತಹ ಆಕಾಂಕ್ಷೆಯೂ ನನಗಿಲ್ಲ. ನಾನು ಸ್ಥಿತ ಪ್ರಜ್ಞ ಎಂದರು. ಸೋಮಣ್ಣ ಮತ್ತು ಅಶೋಕ್ ಅವರಿಗೆ ಎರಡು ಕ್ಷೇತ್ರದ ಟಿಕೆಟ್ ಕೊಟ್ಟಿರುವ ಹಿಂದೆ ಪಕ್ಷದ ತಂತ್ರಗಾರಿಕೆ ಇದೆ. ಇಡೀ ರಾಜ್ಯದಲ್ಲಿ ಮತ ಪಡೆಯಲು ರಣನೀತಿ ಮಾಡಿ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಇಬ್ಬರು ನಾಯಕರಿಗೆ ಎರಡು ಕಡೆ ಟಿಕೆಟ್ ನೀಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಬಿಜೆಪಿ ಟಿಕೆಟ್ ಕೈ ತಪ್ಪಿದವರಿಗೆ ಜೆಡಿಎಸ್ ಗಾಳ ಹಾಕುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜೆಡಿಎಸ್ ಇರುವುದೇ ಅದರ ಸಲುವಾಗಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು. ಇನ್ನು ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ಅಸಮಾಧಾನಗೊಂಡ ಸಿಎಂ, 189 ಅಭ್ಯರ್ಥಿಗಳ ಪಟ್ಟಿ ಮಾತ್ರ ಬಿಡುಗಡೆ ಆಗಿದೆ. ಇನ್ನು 35 ಕ್ಷೇತ್ರದ ಟಿಕೆಟ್ ಪ್ರಕಟವಾಗಬೇಕು. ಪ್ರಕಟಕ್ಕೂ ಮೊದಲೇ ಹಾಲಿಗಳಿಗೆ ಟಿಕೆಟ್ ಸಿಕ್ಕಿಲ್ಲ ಎಂದರೆ ಹೇಗೆ ಎಂದು ಗರಂ ಆದರು. 189 ಅಭ್ಯರ್ಥಿಗಳ ಪಟ್ಟಿ ಬಂದ ನಂತರ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. 224ರಲ್ಲಿ ನಮ್ಮ ಬಹುಮತಕ್ಕಿಂತ 10-15 ಹೆಚ್ಚಿನ ಸ್ಥಾನ ಬರಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಟೆಂಪಲ್ ರನ್:ಟಿಕೆಟ್ ಘೋಷಣೆ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವರ ಮೊರೆ ಹೋಗುತ್ತಿದ್ದಾರೆ. ಮಧ್ಯಾಹ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ಬಳಿಕ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಕ್ಷೇತ್ರಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಧಿಕೃತವಾಗಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಮುಂದಾದ ಸವದಿ.. ನಾಳೆಯೇ ಅಂತಿಮ ತೀರ್ಮಾನ