ಬೆಂಗಳೂರು: ಮೋದಿ ಸಮಯದಾಯದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ ಹಾಗೆ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬಗ್ಗೆ ಮಾತಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ಉತ್ತರ ಕೊಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಸಿದ್ದರಾಮಯ್ಯ ಹಿರಿಯರು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು. ಇದರಿಂದ ಎಲ್ಲರಿಗೂ ನೋವಾಗಿದೆ. ಇದೇ ಕಾಂಗ್ರೆಸ್ ಸಂಸ್ಕೃತಿ, ಇದು ಸಿದ್ದರಾಮಯ್ಯ ಘನತೆಗೆ ತಕ್ಕದಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ. ಯಾವುದೇ ಸಮಾಜದ ಸಿಎಂ, ಸಚಿವರು ಅವರ ಯೋಗ್ಯತೆ, ಕ್ಷಮತೆಯಲ್ಲಿ ಕೆಲಸ ಮಾಡ್ತಾರೆ. ಲೋಪದೋಷ ಆಗಿದ್ರೆ ಅದು ವೈಯಕ್ತಿಕ ಮಟ್ಟದಲ್ಲಿ ಆಗಿರುತ್ತಷ್ಟೇ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ" ಎಂದು ಟೀಕಿಸಿದರು.
ಬಸವ ಪ್ರತಿಮೆಗೆ ಮಾಲಾರ್ಪಣೆ:ಇವತ್ತು ಬಸವ ಜಯಂತಿ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧ ಮುಂಭಾಗದ ಬಸವ ಪ್ರತಿಮೆ ಹಾಗೂ ಚಾಲುಕ್ಯ ವೃತ್ತದಲ್ಲಿನ ಬಸವಣ್ಣರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವ ಆರ್ ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಈ ವೇಳೆ ಹಾಜರಿದ್ದರು.
ಜಯ ವಾಹಿನಿಗೆ ಚಾಲನೆ: ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಡೆ ಮಾಡಿ, ಜಯ ವಾಹಿನಿ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಸಿಎಂ ಅಧಿಕೃತ ಚಾಲನೆ ನೀಡಿದರು. ಇಂದಿನಿಂದ ಪ್ರಚಾರ ಶುರು ಮಾಡುತ್ತಿದೇವೆ. ಬಸವ ತತ್ವದಡಿ ಆಡಳಿತ, ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.