ಬೆಂಗಳೂರು:ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಉಡುಗೊರೆ ನೀಡಲಾಗಿದೆ ಎನ್ನುವ ಆರೋಪ ಕಾಂಗ್ರೆಸ್ ಟೂಲ್ ಕಿಟ್ನ ಭಾಗವಾಗಿದೆ. ಲೋಕಾಯುಕ್ತ ತನಿಖೆ ಬಳಿಕ ಇದರ ಸತ್ಯಾಂಶ ಹೊರಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರಕರ್ತರಿಗೆ ಉಡುಗೊರೆ ನೀಡಲಾಗಿದೆ ಎನ್ನುವುದು ಕಾಂಗ್ರೆಸ್‌ನ ಟೂಲ್ ಕಿಟ್ನ ಪರಿಣಾಮವಾಗಿ ಬಂದಿರುವ ಆರೋಪ. ಅವರು ಸುಳ್ಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನಂತು ಯಾರಿಗೂ ಉಡುಗೊರೆ ಕೊಡುವಂತೆ ಸೂಚನೆ ನೀಡಿಲ್ಲ, ಕಾಂಗ್ರೆಸ್‌ನವರು ಈ ಬಗ್ಗೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಏನೆಲ್ಲ ಗಿಫ್ಟ್ ಕೊಟ್ಟಿದ್ದಾರೆ ಎನ್ನುವುದು ಪತ್ರಿಕೆಯಲ್ಲಿ ಬಂದಿದೆ. ಐಫೋನ್, ಲ್ಯಾಪ್ ಟ್ಯಾಪ್, ಬಂಗಾರದ ಕಾಯಿನ್ಗಳನ್ನೆಲ್ಲ ಕೊಟ್ಟಿದ್ದಾರೆ. ಹಾಗಾಗಿ ನಮ್ಮ ಮೇಲೆ ಆರೋಪ ಮಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಪತ್ರಕರ್ತರಿಗೆ ಉಡುಗೊರೆ ಆರೋಪ ಕುರಿತಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಯಾರೋ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಸಂಸ್ಥೆ ತನಿಖೆ ಮಾಡುತ್ತದೆ, ಲೋಕಾಯುಕ್ತರು ತನಿಖೆ ನಡೆಸುತ್ತಾರೆ. ಆದರೆ ಎಲ್ಲ ಪತ್ರಕರ್ತರೂ ಉಡುಗೊರೆ ಪಡೆದಿದ್ದಾರೆ, ಕೊಟ್ಟಿದ್ದಾರೆ ಎನ್ನುವುದು ಸರಿಯಲ್ಲ. ಕಾಂಗ್ರೆಸ್‌ನ ವಕ್ತಾರರು ಬಹಳ ಕೆಟ್ಟದಾಗಿ ವ್ಯಾಖ್ಯಾನ ಮಾಡಿದ್ದಾರೆ, ಅದನ್ನ ಖಂಡಿಸುತ್ತೇನೆ. ಲೋಕಾಯುಕ್ತ ತನಿಖೆಯಲ್ಲಿ ಎಲ್ಲ ಸತ್ಯಾಂಶ ಹೊರಗೆ ಬರಲಿ ಎಂದರು.
ಪಕ್ಷದ ಸಂಘಟನೆ ಹಾಗೂ ಚುನಾವಣೆ ದೃಷ್ಟಿಯಿಂದ ನಾವು ಸಮಾವೇಶಗಳನ್ನು ಮಾಡುತ್ತಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಸಮಾವೇಶ ಮಾಡಿದ್ದೆವು, ಇಂದು ಕಲಬುರಗಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ನವೆಂಬರ್ನಲ್ಲಿ ಎಸ್ಟಿ ಸಮಾವೇಶ, ನಂತರ ಎಸ್ಸಿ ಸಮಾವೇಶ, ಡಿಸೆಂಬರ್ನಲ್ಲಿ ಮಹಿಳಾ ಸಮಾವೇಶ ಮಾಡಲಿದ್ದೇವೆ. ಇಂದು ದೊಡ್ಡ ಪ್ರಮಾಣದಲ್ಲಿ ಓಬಿಸಿ ಸಮಾವೇಶ ಮಾಡುತ್ತಿದ್ದು, ಎರಡು ಲಕ್ಷ ಜನ ಸೇರುತ್ತಿದ್ದಾರೆ. ಒಂದು ರೀತಿಯಲ್ಲಿ ಒಬಿಸಿ ಸಮುದಾಯದ ದೊಡ್ಡ ಬೆಂಬಲ ಬಿಜೆಪಿಗೆ ಸಿಗುತ್ತಿದೆ ಎಂದು ಹೇಳಿದರು.
ಪೊಲೀಸ್ ಅಧಿಕಾರಿ ನಂದೀಶ್ ಸಾವಿನ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಡಿಜಿಪಿಯವರು ಅವರ ಊರಿನಲ್ಲಿದ್ದಾರೆ, ಇಂದು ಬೆಂಗಳೂರಿಗೆ ಬರುತ್ತಾರೆ. ಆ ಬಗ್ಗೆ ಎಲ್ಲ ರೀತಿಯ ತನಿಖೆ ನಡೆಸುತ್ತೇವೆ. ನಾನು ಅವರಿಗೆ ತನಿಖೆಗೆ ಸೂಚನೆ ನೀಡುತ್ತೇನೆ ಎಂದರು.
ಬಿಎಸ್ವೈ ನಿವಾಸಕ್ಕೆ ಸಿಎಂ:ಕಲಬುರಗಿ ಒಬಿಸಿ ಸಮಾವೇಶಕ್ಕಾಗಿ ಜೊತೆಗೆ ತೆರಳಲು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿದರು. ಕೆಲ ಸಮಯ ಮಾತುಕತೆ ನಡೆಸಿದ ಬಳಿಕ ಸಿಎಂ ಮತ್ತು ಬಿಎಸ್ ಯಡಿಯೂರಪ್ಪ ಒಟ್ಟಿಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ವಿಶೇಷ ವಿಮಾನದ ಮೂಲಕ ಕಲಬುರಗಿಗೆ ತೆರಳಲಿದ್ದಾರೆ.
ಇದನ್ನೂ ಓದಿ:ಸಿಎಂ ಕಚೇರಿಯಲ್ಲಿ ಹುದ್ದೆಗಳ ದರ ಪಟ್ಟಿ ಹಾಕಿದರೆ ಒಳಿತು: ಕಾಂಗ್ರೆಸ್