ಬೆಂಗಳೂರು: ಚುನಾವಣಾ ವರ್ಷ ಅಂತ ಬೇಜವಾಬ್ದಾರಿಯಿಂದ ಬೇಕಾಬಿಟ್ಟಿ ಘೋಷಣೆ ಮಾಡಬಹುದಿತ್ತು. ನಮ್ಮದು ಜವಾಬ್ದಾರಿಯುತ ಸರ್ಕಾರ. ಜವಾಬ್ದಾರಿಯುತ ಬಜೆಟ್ ಮಂಡಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಬಜೆಟ್ ಕುರಿತು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕತೆಯನ್ನು ನೋಡಿ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದೇವೆ. ಆ ಮೂಲಕ ಸಮತೋಲನ ಕಾಪಾಡಿಕೊಂಡಿದ್ದೇವೆ. ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ಬಜೆಟ್ನಲ್ಲಿ ಘೋಷಿಸಿಲ್ಲ. ಯಾವುದು ಮಾಡಲು ಸಾಧ್ಯವೋ ಅದನ್ನು ಮಾತ್ರ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಇದು ಸಾಮಾಜಿಕ, ಶೈಕ್ಷಣಿಕ, ಜನಪರ, ಜನಕೇಂದ್ರೀಕೃತ, ಜನಾಧಾರಿತ ಬಜೆಟ್ ಆಗಿದೆ. ಕೋವಿಡ್‌ನಿಂದ ಕಳೆದ ಮೂರು ವರ್ಷದಿಂದ ಕೊರತೆ ಬಜೆಟ್ ಮಂಡಿಸಿದ್ದೆವು. ಈಗ 402 ಕೋಟಿ ರೂ. ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದೇವೆ. ಇದು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ತೋರಿಸುತ್ತದೆ. ನಮ್ಮ ತೆರಿಗೆ ಸಂಗ್ರಹ ಕ್ಷಮತೆ ಹೆಚ್ಚಿಸಿದ್ದೇವೆ. ಸರಾಸರಿ 23% ರಾಜಸ್ವ ಜಮೆ ಹೆಚ್ಚಾಗಿದೆ. ಕಳೆದ ಬಾರಿ 72,000 ಸಾಲ ಪಡೆಯುತ್ತೇವೆ ಅಂದಿದ್ದೆವು. ಆದರೆ ಕಡಿಮೆ ಸಾಲ ತೆಗೆದುಕೊಂಡಿದ್ದೇವೆ. ಸರ್ಕಾರ ಹಣಕಾಸಿನ ನಿರ್ವಹಣೆಯನ್ನು ದಕ್ಷತೆಯಿಂದ ಮಾಡಿದ್ದೇವೆ. ಹಿಂದಿನ ಯಾವುದೇ ಸರ್ಕಾರ ಈ ರೀತಿ ಮಾಡಿಲ್ಲ. ಕೃಷಿ, ಉತ್ಪಾದನೆ, ಮೂಲಸೌಕರ್ಯ ಮೂರು ವಲಯದಲ್ಲಿ ನಮ್ಮ ಬೆಳವಣಿಗೆ ದರ ಹೆಚ್ಚಿದೆ. ಆ ಮೂಲಕ ಸಾಧನೆ ಮಾಡಿದ್ದೇವೆ ಎಂದರು.
ಹಲವು ಕಾರ್ಯಕ್ರಮಗಳು ಅನುಷ್ಠಾನವಾಗಿವೆ. ಕೆಲವು ಇನ್ನೂ ಅನುಷ್ಠಾನದ ಪ್ರಕ್ರಿಯೆಯಲ್ಲಿದೆ. ಈಗಾಗಲೇ ಆದಾಯ ವೆಚ್ಚ 76% ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡಲಾಗಿದೆ. ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂಬ ವಿರೋಧ ಪಕ್ಷದ ಆರೋಪ ಶುದ್ಧ ಸುಳ್ಳು. ಈ ವರ್ಷ 3,09,182 ಕೋಟಿ ರೂ. ಬಜೆಟ್ ಮಂಡಿಸಿದ್ದೇವೆ. ಆ ಮೂಲಕ ಈ ಬಾರಿ 43,402 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಮಂಡನೆ ಮಾಡಿದ್ದೇವೆ.
ಈ ಬಾರಿ 16% ಬಜೆಟ್ ಗಾತ್ರ ಹೆಚ್ಚಿಸಿದ್ದೇವೆ. ಇದು ಇನ್ನಷ್ಟು ಆರ್ಥಿಕ ವೃದ್ಧಿಯನ್ನು ತೋರಿಸುತ್ತದೆ. ಆದಾಯ ಹೆಚ್ಚುವರಿ ಆಗಿದೆ. ವಿತ್ತೀಯ ಕೊರತೆ 3% ಒಳಗಡೆ ಇದೆ, ಒಟ್ಟಾರೆ ಹೊಣೆಗಾರಿಕೆ 24.2% ಇದೆ. ಆರ್ಥಿಕ ಶಿಸ್ತು ಪಾಲನೆಯಾಗಿದೆ. ಆ ಮೂಲಕ ರಾಜ್ಯದ ಆರ್ಥಿಕತೆ ಬೆಳವಣಿಗೆ ದರದಲ್ಲಿದ್ದೇವೆ, ಸರಿಯಾದ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಕೃಷಿಗೆ ಹೆಚ್ಚಿನ ಆದ್ಯತೆ, ರೈತರ ಸಾಲದ ಮಿತಿ ಹೆಚ್ಚಳ, ಅಲ್ಪಾವಧಿಯ ಬಡ್ಡಿರಹಿತ ಸಾಲದ ಮಿತಿಯನ್ನು 3 ಲಕ್ಷದಿಂದ 5,00,000 ರೂ.ಗೆ ಹೆಚ್ಚಿಸಿದ್ದೇವೆ. 30 ಲಕ್ಷ ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಿದ್ದೇವೆ. ಅಗತ್ಯವಿದ್ದಾಗ ಹಣ ಸಿಗುವುದಿಲ್ಲ ಎಂಬ ರೈತರ ಸಮಸ್ಯೆ ಬಗೆಹರಿಸಲು ಭೂ ಸಿರಿಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10,000 ರೂ. ಹೆಚ್ಚುವರಿ ಬಡ್ಡಿರಹಿತ ಸಾಲ ಕೊಡಲಿದ್ದೇವೆ. ರೈತರಿಗೆ ಜ್ಯೋತಿ ವಿಮೆ ಯೋಜನೆ ಸೌಲಭ್ಯ ಘೋಷಣೆ ಮಾಡಿದ್ದೇವೆ. 55 ಲಕ್ಷ ರೈತ ಕುಟುಂಬಕ್ಕೆ 180 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ.