ಬೆಂಗಳೂರು: ಅನ್ನ ದಾಸೋಹ, ಆಶ್ರಯ ದಾಸೋಹ ಹಾಗೂ ಅಕ್ಷರ ದಾಸೋಹವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ. ಸಿದ್ದಗಂಗಾ ಮಠದ ಮಾದರಿಯಲ್ಲೇ ತ್ರಿವಿಧ ದಾಸೋಹ ತತ್ತ್ವ ಅನುಸರಿಸಿಕೊಂಡು ಹೋಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದಾಸೋಹ ದಿನಾಚರಣೆ ಮಾಡುತ್ತಿದ್ದೇವೆ, ಸಿದ್ದಗಂಗಾ ಮಠ ದಾಸೋಹದ ದೊಡ್ಡ ಪರಂಪರೆ ಹುಟ್ಟುಹಾಕಿದೆ. ಬಸವೇಶ್ವರ ಅವರ ಮಾರ್ಗದರ್ಶನವನ್ನು ಶಿವಕುಮಾರ ಸ್ವಾಮೀಜಿ ಅವರು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದಿದ್ದರು. ಮಠದ ಈಗಿನ ಗುರುಗಳು ಅದನ್ನ ಮುಂದುವರೆಸಿದ್ದಾರೆ. ಹಾಗಾಗಿ, ಸಿದ್ದಗಂಗಾ ಮಠದಲ್ಲೇ ದಾಸೋಹ ದಿನಾಚರಣೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದರು.
ನಮ್ಮ ಸರ್ಕಾರವು ಕೂಡ ತ್ರಿವಿಧ ದಾಸೋಹದ ಹೆಜ್ಜೆಯಲ್ಲಿ ಸಾಗುತ್ತಿದೆ. ಪಡಿತರ ಚೀಟಿದಾರರಿಗೆ ಅಕ್ಕಿ ನೀಡುವುದು, ಒಂದು ಕೆ.ಜಿ ಜೋಳವನ್ನೂ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ವಿದ್ಯಾರ್ಥಿ ವೇತನ ಕೊಟ್ಟು ವಿದ್ಯಾ ದಾಸೋಹ ಮಾಡುತ್ತಿದ್ದೇವೆ.