ಬೆಂಗಳೂರು:2006ಕ್ಕೂ ಮೊದಲ ನೇಮಕ ಆಗಿರುವ ಉಪನ್ಯಾಸಕರಿಗೆ ಹಳೆ ಪಿಂಚಣಿ ಕೊಡುತ್ತೇವೆ. ನಂತರ ನೇಮಕಾತಿಯಾದವರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕೊಡಲಾಗುತ್ತದೆ. ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೂ ಎನ್ಪಿಎಸ್ ಕೊಡುವ ಬಗ್ಗೆ ನ್ಯಾಯ ಸಮ್ಮತವಾಗಿ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು (ಗುರುವಾರ) ನಡೆದ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅನುದಾನಿತ ಶಿಕ್ಷಕರಿಗೆ ಹಳೆ ಅಥವಾ ಹೊಸ ಪಿಂಚಣಿ ವ್ಯವಸ್ಥೆ ಕೊಡಬೇಕು. ನಿನ್ನೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಅನುದಾನಿತ ಪದವಿ ಉಪನ್ಯಾಸಕರ ಪಿಂಚಣಿಗೆ 15 ಪರ್ಸೆಂಟ್ ಮ್ಯಾನೇಜ್ ಮೆಂಟ್ ಕೊಡಬೇಕು, 10 ಪರ್ಸೆಂಟ್ ನೌಕರರು ಕೊಡಬೇಕು, ಉದ್ಯೋಗಿ ಹಿತರಕ್ಷಣೆ ಮಾಡಲು ಈ ರೀತಿ ಕೊಡಬೇಕು, ಈಗಾಗಲೇ ಕಾರ್ಖಾನೆ ಮತ್ತು ಅದರ ಉದ್ಯೋಗಿಗಳು ಇದೇ ರೀತಿ ಕಾಂಟ್ರಿಬ್ಯೂಷನ್ ಕೊಡುತ್ತಿದ್ದಾರೆ ಎಂದರು.
2006ರ ಮೊದಲ ನೇಮಕವಾದವರಿಗೆ ಒಪಿಎಸ್ ಪಿಂಚಣಿ ಕೊಡಲಾಗುತ್ತಿದೆ. ನಂತರ ನೇಮಕವಾದವರಿಗೆ ಎನ್ಪಿಎಸ್ ಪಿಂಚಣಿ ಕೊಡಲಾಗಿದೆ. 2006ಕ್ಕಿಂತ ಮೊದಲು ನೇಮಕಾತಿ ಆಗಿ 2006 ರ ನಂತರ ಕೆಲಸಕ್ಕೆ ಹಾಜರಾಗಿರುವವರಿಗೂ ಎನ್ಪಿಎಸ್ ಕೊಡಲಾಗಿದೆ. ಅದನ್ನು ಎನ್ಪಿಎಸ್ಗೆ ಪರಿಗಣಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನೇಮಕಾತಿ ಪತ್ರ 2006 ಕ್ಕಿಂತ ಮೊದಲಿದ್ದರೆ ಅದನ್ನು ಪರಿಗಣಿಸಿಯೇ ಅವರಿಗೆಲ್ಲಾ ಒಪಿಎಸ್ ಪಿಂಚಣಿಗೆ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯಿಂದ ಆಡಳಿತ ಮಂಡಳಿಗಳು ತನ್ನ ಪಾಲಿನ ಮೊತ್ತವನ್ನು ಪಿಂಚಣಿಗೆ ನೀಡಲು ನಿರ್ದೇಶಕ ಕೊಡಲಾಗುತ್ತದೆ. ಅನುದಾನಿತ ಕಾಲೇಜುಗಳಿಗೆ ಎನ್ಪಿಎಸ್ ಕೊಡುವ ಬೇಡಿಕೆಯನ್ನು ನ್ಯಾಯ ಸಮ್ಮತವಾಗಿ ಪರಿಗಣನೆ ಮಾಡಲಾಗುತ್ತದೆ ಎಂದರು.