ಬೆಂಗಳೂರು: ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ, ಸಾಮಾನ್ಯ ವ್ಯಕ್ತಿ ಭದ್ರತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಹಿಜಾಬ್, ಹಲಾಲ್ನಂತಹ ಸಂದರ್ಭದಲ್ಲಿಯೂ ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದು, ಮುಂದೆಯೂ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯುಗಾದಿಗೆ ಮಾಂಸ ಖರೀದಿಸುವ ವಿಚಾರದ ಕುರಿತು ಹಲಾಲ್ ವಿರೋಧಿ ಅಭಿಯಾನ ನಡೆದಿದೆ. ಎಲ್ಲ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ, ಇದಕ್ಕೆಲ್ಲ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ. ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದರು.
ಹಿಬಾಜ್, ದೇವಾಲಯ ಮಳಿಗೆ ಗುತ್ತಿಗೆ ವಿವಾದ, ಹಲಾಲ್ ವಿಚಾರಗಳಿಂದಾಗಿ ರಾಜ್ಯದಲ್ಲಿ ಸಂಘರ್ಷಮಯ ವಾತಾವರಣದಲ್ಲಿಯೂ ಇದುವರೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಂಡಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.