ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಮಾಜಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪಿಟಿಸಿಎಲ್ ಕಾಯಿದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಯಿದೆಯನ್ನು ದುರ್ಬಲವಾಗಲು ಬಿಡುವುದಿಲ್ಲ ಎಂದಿರುವ ಅವರು, ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಅಂಬೇಡ್ಕರ್ ಗುಣಧರ್ಮಗಳನ್ನು ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು.
'ಪರಿವರ್ತನೆ ಲೋಕದ ಧರ್ಮ':ಯಾವುದೇ ಒಂದು ಜನಾಂಗ ಮತ್ತು ಸಮುದಾಯವನ್ನು ರಾಜಕೀಯವಾಗಿ ಬಳಕೆ ಮಾಡುವುದು ಅಪರಾಧ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಹಾಗಾಗಿ, ಸ್ವತಂತ್ರ ಚಿಂತನೆ ಮಾಡಿ, ಒಳ್ಳೆಯವರನ್ನು ಅವರನ್ನು ಗುರುತಿಸಿ, ಬರೀ ಮಾತನಾಡಿ ಘೋಷಣೆ ಮಾಡುವವರನ್ನಲ್ಲ. ಕೆಲಸದಿಂದ ಎಲ್ಲವನ್ನೂ ಅಳೆಯಿರಿ. ಪರಿವರ್ತನೆ ಲೋಕದ ಧರ್ಮ. ಅಂಬೇಡ್ಕರ್‌ರವರ ಮಂತ್ರವೂ ಇದೆ ಆಗಿತ್ತು. ನಾವು ಪರಿವರ್ತನೆ ಮಾಡಿಯೇ ತೀರುತ್ತೇವೆ. ನೀವು ಪರಿವರ್ತನೆಯ ಸಾಧನೆ ಮಾಡಿ, ಅಲ್ಲಿಯವರೆಗೂ ವಿಶ್ರಮಿಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡೋಣ ಎಂದು ಕರೆ ಕೊಟ್ಟರು.