ಬೆಂಗಳೂರು:ಕರ್ನಾಟಕ ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಈವರೆಗೆ ರೈತರು, ಸರ್ವೆ ನಂಬರ್ ಹಾಗೂ ಆಧಾರ್ ಗಳನ್ನು ಜೋಡಿಸಲಾಗಿದ್ದು, 78 ಲಕ್ಷ ರೈತರನ್ನು ಈ ವ್ಯಾಪಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ನೈಸರ್ಗಿಕ ಕೃಷಿ ಮತ್ತು ಡಿಜಿಟಲ್ ಕೃಷಿ ಕುರಿತು ನಡೆದ ವಿಡಿಯೊ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಕೃಷಿ ಪ್ರಧಾನ ಕಾರ್ಯದರ್ಶಿಗಳು ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂದಿರುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಭೂಮಿ ತಂತ್ರಜ್ಞಾನದಡಿ ಈ ಹಿಂದೆಯೇ ಡಿಜಿಟಲೀಕರಣವಾಗಿದೆ. 62 ಲಕ್ಷ ಭೂಮಿಯುಳ್ಳ ಹಾಗೂ 16 ಲಕ್ಷ ಭೂ ರಹಿತರನ್ನೂ ತಂತ್ರಾಂಶದಲ್ಲಿ ಸೇರಿಸಲಾಗಿದೆ.
ಫ್ರೂಟ್ಸ್ ಯೋಜನೆಯನ್ನು ಎಲ್ಲ ರಾಜ್ಯಗಳೂ ಅಳವಡಿಸಿಕೊಳ್ಳುತ್ತಿವೆ. ಈ ತಂತ್ರಾಂಶವನ್ನು ನಿರಂತರವಾಗಿ ಸುಧಾರಣೆ ಮಾಡಲಾಗುತ್ತಿದೆ. ಇದರ ಉಪಯೋಗ ಪಡೆದು ರೈತರನ್ನು ಜೋಡಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆಯನ್ನು ಕರ್ನಾಟಕದಲ್ಲಿ ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ ಎಂದರು.
ಕ್ರಾಂತಿಕಾರಿ ನ್ಯಾನೋ ಯೂರಿಯಾ: ಕೃಷಿ ಕ್ಷೇತ್ರದಲ್ಲಿ ನ್ಯಾನೋ ಯೂರಿಯಾ ಕ್ರಾಂತಿಯನ್ನು ಉಂಟುಮಾಡಿದ್ದು, ಮೊದಲ ನ್ಯಾನೋ ಯೂರಿಯಾ ಘಟಕ ಬೆಂಗಳೂರಿನಲ್ಲಿದೆ. ಅಧ್ಯಯನ ಮಾಡಿ ರೈತರಿಗೂ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲವಿದೆ ಎಂದು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಡಿಜಿಟಲ್ ತಂತ್ರಜ್ಞಾನದ ಮೂಲಕ ರೈತರೇ ತಮ್ಮ ಭೂಮಿಯ ಸಮೀಕ್ಷೆ ಮಾಡುತ್ತಿದ್ದಾರೆ. ಈವರೆಗೆ 212 ಕೋಟಿ ಭೂ ಪ್ರದೇಶವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬೆಳೆ ಸಮೀಕ್ಷೆಯನ್ನು ರೈತರೇ ಮಾಡುತ್ತಿದ್ದಾರೆ. 212 ಕೋಟಿ ಪೈಕಿ 16,584 ಬೆಳೆಗಳನ್ನು ರೈತರೇ ಸಮೀಕ್ಷೆ ಮಾಡಿದ್ದಾರೆ. 1.61ಕೋಟಿ ಪ್ರದೇಶವನ್ನು ಇಲಾಖೆ ಮಾಡಿದೆ. ಯಾವುದೇ ವ್ಯಾಜ್ಯಕ್ಕೆ ಎಡೆ ಮಾಡಿಕೊಡದಿರಲು ಶೇ. 100 ರಷ್ಟು ರೈತರೇ ಸಮೀಕ್ಷೆ ಮಾಡಲು ಕ್ರಮ ವಹಿಸಲಾಗುತ್ತಿದೆ. ರೈತರು ಅತ್ಯಂತ ಪ್ರಾಮಾಣಿಕವಾಗಿ ಇದನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ನೈಸರ್ಗಿಕ ಕೃಷಿ ದೀರ್ಘಕಾಲಿಕ ಯೋಜನೆ: ನೈಸರ್ಗಿಕ ಕೃಷಿ ದೀರ್ಘಕಾಲಿಕ ಯೋಜನೆಯಾಗಿದ್ದು, ಈ ಕುರಿತು ಸಂಶೋಧನೆ ಹಾಗೂ ಪ್ರಮಾಣೀಕರಣ ಅತ್ಯಂತ ಪ್ರಮುಖ ಅಂಶಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.