ಕರ್ನಾಟಕ

karnataka

ETV Bharat / state

ಶುಕ್ರವಾರದವರೆಗೂ ಕಠಿಣ ನಿಯಮ ಮುಂದುವರಿಕೆ: ಸಿಎಂ ಸಭೆಯ ಮಹತ್ವದ ನಿರ್ಧಾರಗಳಿವು..

ರಾಜ್ಯದಲ್ಲಿ ಜಾರಿಗೆ ತಂದಿರುವ ನಿಯಮಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಿಎಂ, ಸಚಿವರು, ತಜ್ಞರ ಸಮಿತಿ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.

CM bommai meeting highlights
ಸಿಎಂ ಬೊಮ್ಮಾಯಿ ಸಭೆ ಮುಖ್ಯಾಂಶಗಳು

By

Published : Jan 17, 2022, 7:16 PM IST

ಬೆಂಗಳೂರು:ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಟಫ್ ರೂಲ್ಸ್‌ನಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಧಾರವನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಜನವರಿ‌.25 ರವರೆಗೂ ಕಾದುನೋಡಿ ಮುಂದಿನ ನಿರ್ಧಾರ ಕೈಗೊಳ್ಳುವ ನಿಲುವಿಗೆ ಸರ್ಕಾರ ಬಂದಿದೆ.

ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಿಂದ ವರ್ಚುವಲ್‌ ಮೂಲಕ ಕೋವಿಡ್ ಕುರಿತು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ತಜ್ಞರ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವರ್ಚುಯಲ್ ಮೂಲಕ ಭಾಗಿಯಾಗಿದ್ದರು.

ಜನವರಿ 26ಕ್ಕೆ ಇಡೀ ದೇಶದಲ್ಲಿ ಕೋವಿಡ್ ಪೀಕ್​ಗೆ ಹೋಗಿ ನಂತರ ಇಳಿಮುಖವಾಗಲಿದೆ. ಹಾಗಾಗಿ ರಾಜ್ಯದಲ್ಲಿ ಲಾಕ್​​ಡೌನ್ ಜಾರಿ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿ ಕೈಮೀರಿದಲ್ಲಿ ಮಾತ್ರ ಲಾಕ್​​​ಡೌನ್​​​ನಂತಹ ನಿರ್ಧಾರಕ್ಕೆ ಬರಬೇಕು. ಸದ್ಯ ಕೇಸ್​​​ಗಳ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಲಾಕ್​ಡೌನ್ ನಿರ್ಧಾರ ಬೇಡ ಎಂದು ತಜ್ಞರ ಅಭಿಪ್ರಾಯಕ್ಕೆ ಸಚಿವರು, ಅಧಿಕಾರಿಗಳು ಕೂಡ ಸಹಮತ ವ್ಯಕ್ತಪಡಿಸಿದರು.

ಹೀಗಾಗಿ ತಜ್ಞರು,ಸಚಿವರು, ಅಧಿಕಾರಿಗಳ ಅಭಿಪ್ರಾಯದಂತೆ ಲಾಕ್​​​ಡೌನ್ ಕುರಿತು ಈಗ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎನ್ನುವ ನಿಲುವನ್ನೇ ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಕೈಗೊಂಡಿದ್ದು,ರಾಜ್ಯಕ್ಕೆ ಸದ್ಯ ಲಾಕ್​​​ಡೌನ್ ಭೀತಿ ಇಲ್ಲದಂತಾಗಿದೆ.

ಟಫ್ ರೂಲ್ಸ್ ರಿಲ್ಯಾಕ್ಸೇಷನ್ ಕುರಿತು ಮತ್ತೊಂದು ಸಭೆ:

ಹೋಟೆಲ್ ಉದ್ಯಮ, ಜಿಮ್, ಸಿನಿಮಾ ಮಂದಿರ ಮಾಲೀಕರು ಸೇರಿ ಶೇ.50ರ ನಿಯಮ ವ್ಯಾಪ್ತಿಯಲ್ಲಿ ಬರುವವರು ಅಸಮಾಧಾನ ವ್ಯಕ್ತಪಡಿಸಿದ್ದು, ಬಹಿರಂಗವಾಗಿಯೇ ಟಫ್ ರೂಲ್ಸ್​​​​ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಸದ್ಯದ ಮಟ್ಟಿಗೆ ಇರುವ ರೂಲ್ಸ್‌ನಲ್ಲಿ ಬದಲಾವಣೆ ಮಾಡುವುದು ಬೇಡ. ಶುಕ್ರವಾರ ಮತ್ತೆ ಸಭೆ ನಡೆಸಿ ಕೇಂದ್ರ ಸರ್ಕಾರದ ಸಲಹೆ, ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ, ರಾಜ್ಯದಲ್ಲಿನ ಸ್ಥಿತಿಗತಿ ಅವಲೋಕಿಸಿ ಶೇ.50 ರ ನಿಯಮಕ್ಕೆ ವಿನಾಯಿತಿ ನೀಡುವ ಕುರಿತು ಪುನರ್ ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ವೀಕೆಂಡ್ ಕರ್ಫ್ಯೂ ನಿರ್ಧಾರ ಪರಿಶೀಲನೆ:

ರಾಜ್ಯದಲ್ಲಿ ಜನವರಿ 19ರವರೆಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು ಜನವರಿ ಅಂತ್ಯದವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈಗ ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದ್ದು, ಈ ಕುರಿತು ಶುಕ್ರವಾರ ಅಂದಿನ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶುಕ್ರವಾರ ಶಾಲೆಗಳ ಭವಿಷ್ಯ ನಿರ್ಧಾರ:

ರಾಜ್ಯದಲ್ಲಿ ಶಾಲಾ- ಕಾಲೇಜುಗಳ ಭೌತಿಕ ತರಗತಿ ಸ್ಥಗಿತ ಮಾಡುವ ಕುರಿತು ಶುಕ್ರವಾರ ನಡೆಯುವ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ನರ್ಸಿಂಗ್, ವೈದ್ಯಕೀಯ ಕೋರ್ಸ್ ಹೊರತುಪಡಿಸಿ ಇತರ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಕೋವಿಡ್ ಸ್ಥಿತಿಗತಿ ನೋಡಿಕೊಂಡು ಶಾಲೆ-ಕಾಲೇಜುಗಳು ನಡೆಯಬೇಕೋ, ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ ರಾಜ್ಯದ ಹಲವು ಕಡೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೋವಿಡ್ ಕಾಣಿಸಿಕೊಳ್ಳುತ್ತಿದ್ದು, ಆತಂಕ ಸೃಷ್ಟಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಭೌತಿಕ ತರಗತಿ ಮುಚ್ಚುವ ಆದೇಶವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತಂತೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಕೋವಿಡ್ ಟೆಸ್ಟಿಂಗ್ ಪ್ರಮಾಣ ಇಳಿಕೆಗೆ ನಿರ್ಧಾರ:

ರಾಜ್ಯದಲ್ಲಿ ಪ್ರತಿದಿನ 2 ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಇಷ್ಟು ಪ್ರಮಾಣದ ಪರೀಕ್ಷೆ ಬೇಡ, ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡಬೇಡಿ ಎಂದು ಐಸಿಎಂಆರ್ ಸೂಚಿಸಿದೆ. ಹಾಗಾಗಿ ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡಬಾರದು. ಸೋಂಕಿತರ ಸಂಪರ್ಕಿತರು,ರೋಗಲಕ್ಷಣ ಇರುವವರಿಗೆ ಮತ್ತು ಅಗತ್ಯತೆ ಇರುವವರಿಗೆ ಕೋರಿಕೆ ಮೇರೆಗೆ ಕೋವಿಡ್ ಪರೀಕ್ಷೆ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ ನಾಳೆಯಿಂದ ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯಲ್ಲಿ ಶೇ.25 ರಷ್ಟು ಇಳಿಕೆಯಾಗಲಿದೆ.

ಸಭೆಯ ಇತರ ನಿರ್ಧಾರಗಳು..

1. ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಹಾಗೂ ಹೆಚ್ಚು ಸಿಬ್ಬಂದಿ ನಿಯೋಜಿಸಲು ಸೂಚನೆ

2. ಜನ ಟ್ರಯಾಜಿಂಗ್​​​​ಗೆ ದಾಖಲಾಗುವುದನ್ನು ನಿಯಂತ್ರಿಸಲು ಸಲಹೆ

3. ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚನೆ

4.ಕೊಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಿ, ವಿಶ್ವಾಸ ಮೂಡಿಸಬೇಕು.

5. ಔಷಧಿ ಕಿಟ್​​​​ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು

6. ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆದು ಹಾಕಲು ಸಲಹೆ

7. ಸ್ಥಳೀಯ ವೈದ್ಯರು ಕನ್ಸಲ್ಟೇಶನ್ ಮಾಡುವಂತಾಗಬೇಕು

8. ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್​​​ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು

9. ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು

10. ಆಕ್ಸಿಜನ್ ಪ್ಲಾಂಟ್​ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚನೆ

11. ಆಸ್ಪತ್ರೆಗಳಲ್ಲಿ ಜನರೇಟರ್​​​​ಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ

12. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು

13. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿನೆ

14. ಔಷಧಿಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಲು ಸೂಚನೆ

15. ಮಾರ್ಗಸೂಚಿ ಪಾಲನೆ ಕುರಿತು ಜಾಗೃತಿ ಮೂಡಿಸುವುದು

16. ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನ

17. ಭಾರತ ಸರ್ಕಾರದ ನಿಯಮಾವಳಿಗಳಂತೆ ಐಸಿಎಂಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಲು ಸೂಚನೆ

18. ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧಾರ

19. 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಸೂಚನೆ

ಇಂದಿನ ಸಭೆಯಲ್ಲಿ ಯಾವುದೇ ಹೊಸ ನಿಯಮ ಜಾರಿ, ಪರಿಷ್ಕರಣೆ, ಸಡಿಲಿಕೆ ಮಾಡದೆ ಇರುವ ಎಸ್ಒಪಿಯನ್ನೇ ಮುಂದುವರೆಸುವ ನಿಲುವಿಗೆ ಬರಲಾಗಿದೆ. ಶುಕ್ರವಾರ ತುರ್ತು ಸಭೆ ನಡೆಸಿ ಎಸ್ಒಪಿ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಬರುವ ಸೀಮಿತ ನಿರ್ಣಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನ ಕೋವಿಡ್ ಸಭೆ ಮುಗಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​​ಡೌನ್ ಇಲ್ಲ, ವೀಕೆಂಡ್ ಕರ್ಫ್ಯೂ ಸೇರಿ ಕಠಿಣ ನಿಯಮ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ

ABOUT THE AUTHOR

...view details