ಬೆಂಗಳೂರು :ರಾಜ್ಯದಲ್ಲಿ ಹಲವು ಭಾಗದಲ್ಲಿ ಕೊರೊನಾ ಕಂಟ್ರೋಲ್ಗೆ ಬಂದರೂ ಗಡಿಭಾಗದಲ್ಲಿ ನಿತ್ಯ ವ್ಯತ್ಯಾಸವಾಗ್ತಿದೆ. ಅದರಲ್ಲೂ ಕೇರಳ, ಮಹಾರಾಷ್ಟ್ರ, ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ಕೋವಿಡ್ ಏರಿಳಿತ ಮುಂದುವರೆದಿದೆ.
ಈ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಕೋವಿಡ್-19 ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದರು.
ಬಳಿಕ ಮಾತಾನಾಡಿದ ಸಿಎಂ ಬೊಮ್ಮಾಯಿ, ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ, ಉಡುಪಿ, ಚಾಮರಾಜನಗರ, ಕೊಡಗು ಜಿಲ್ಲೆಗಳ ಡಿಸಿಗಳ ಜತೆ ಚರ್ಚೆ ಆಗಿದೆ. ಕೋವಿಡ್ ಪ್ರಮಾಣ, ಆಸ್ಪತ್ರೆ ದಾಖಲು, ಟೆಸ್ಟಿಂಗ್, ಲಸಿಕೆ ಬಗ್ಗೆ ವಿವರ ಪಡೆದಿದ್ದೇವೆ. ಕಾಸರಗೋಡಿನಲ್ಲಿ ಒಂದು ದಿನ ಕೊರೊನಾ ಹೆಚ್ಚಾಗಿದ್ದಕ್ಕೆ ದಕ್ಷಿಣ ಕನ್ನಡದಲ್ಲೂ ಹೆಚ್ಚಾಗಿತ್ತು. ಉಳಿದಂತೆ ಕಳೆದ 30 ರಿಂದಲೂ ಕೋವಿಡ್ ಇಳಿದಿದೆ. ಚಾಮರಾಜನಗರ, ಹಾಸನಗಳಲ್ಲೂ ಕೋವಿಡ್ ಕಮ್ಮಿಯಾಗಿದೆ ಎಂದರು.
ಉಡುಪಿಯ ಕೆಲವು ಕಡೆ ಕ್ರಮ ಅಗತ್ಯವಿದ್ದು, ಎಲ್ಲ ಕಡೆ ಟೆಸ್ಟಿಂಗ್, ಲಸಿಕೆ ಹೆಚ್ಚಳ ಮಾಡಲು ಸೂಚಿಸಲಾಗಿದೆ. ಅಂಗಡಿ ಭಾಗದಿಂದ 20 ಕಿ.ಮೀ ವ್ಯಾಪ್ತಿಯ ಎಲ್ಲ ಕಡೆಯೂ ಲಸಿಕೆ, ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಲಾಗಿದೆ. ಮಂಗಳೂರು, ಉಡುಪಿಯಲ್ಲೂ ಲಸಿಕೀಕರಣ ಹೆಚ್ಚಿಸಲು ತಿಳಿಸಲಾಗಿದೆ. 35 ಸಾವಿರ ಲಸಿಕೆ ಸಂಗ್ರಹ ಇದ್ದು, ಇವುಗಳ ವಿತರಣೆಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಗಣೇಶೋತ್ಸವ ಚರ್ಚೆಯಿಲ್ಲ :ರಾಜ್ಯದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ, ಈ ಸಭೆಯಲ್ಲಿ ಗಣೇಶೋತ್ಸವ ಬಗ್ಗೆ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ ಗಣೇಶೋತ್ಸವವನ್ನು ಯಾವ ರೀತಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ. ಈ ಸಂಬಂಧ ಗಡಿ ಜಿಲ್ಲೆಗಳನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದರು.