ಕರ್ನಾಟಕ

karnataka

ETV Bharat / state

ನೀರಾವರಿ ಯೋಜನೆಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ - ಅಧಿಕಾರಿಗಳಿಗೆ ಸಿಎಂ ಸೂಚನೆ

ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದರು. ಈ ವೇಳೆ ನೀರಾವರಿ ಯೋಜನೆಗಳ ಅಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

CM meeting
ಅಧಿಕಾರಿಗಳಿಗೆ ಸಿಎಂ ಸೂಚನೆ

By

Published : Aug 11, 2021, 10:12 PM IST

ಬೆಂಗಳೂರು:ನೀರಾವರಿ ಯೋಜನೆಗಳ ಅಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣದಲ್ಲಿ ಸಿಎಂ ಇಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ - 3ರ ಭೂಸ್ವಾಧೀನ ಪ್ರಕ್ರಿಯೆ ಮತ್ತು ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕುರಿತು ಕೈಗೊಳ್ಳಬೇಕಾಗಿರುವ ಕ್ರಮಗಳು, ಆರ್ಥಿಕ ಹೊಂದಾಣಿಕೆ ಮತ್ತು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ರೂಪುರೇಷೆಗಳ ಕುರಿತು ಚರ್ಚಿಸಿದರು.

ಪ್ರಸ್ತುತ ಅನುಷ್ಠಾನಕ್ಕೆ ಕೈಗೊಂಡಿರುವ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿನ ರೂಪುರೇಷೆಗಳನ್ನು ಮರು ಪರಿಶೀಲಿಸುವ ಅವಶ್ಯಕತೆ, ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲಾದ ವೆಚ್ಚಕ್ಕೆ ಪೂರಕವಾಗಿ ನಿರ್ಮಾಣಗೊಳಿಸಲಾದ ಯೋಜನೆಗಳ ಭೌತಿಕ ಪ್ರಗತಿ ಮತ್ತು ಕಲ್ಪಿಸಲಾದ ನೀರಾವರಿ ಸಾಮರ್ಥ್ಯ ಕುರಿತು ಮೌಲ್ಯಮಾಪನ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.

ವಿವಿಧ ಯೋಜನೆಗಳ ಬಗ್ಗೆ ಚರ್ಚೆ:

ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ನವಿಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಹಾಗೂ ಯೋಜನೆಗಳಡಿ ಕಲ್ಪಿಸಲಾಗುತ್ತಿರುವ ನೀರಾವರಿ ಸಾಮರ್ಥ್ಯದ ಬಗ್ಗೆ ಮತ್ತು ಪ್ರಸಕ್ತ ಸಾಲಿನ ಆಯವ್ಯಯ ಅನುದಾನ, ವೆಚ್ಚಗಳ ಕುರಿತು ಚರ್ಚಿಸಿದರು.

ಅಧಿಕಾರಿಗಳಿಗೆ ಸೂಚನೆ:

ಜಲಸಂಪನ್ಮೂಲ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆಗಳು, ಆಧುನೀಕರಣ ಯೋಜನೆಗಳು, ಕೇಂದ್ರ ಧನ ಸಹಾಯ ಪಡೆಯುತ್ತಿರುವ ಯೋಜನೆಗಳ ವಸ್ತುಸ್ಥಿತಿ ಮತ್ತು ಪ್ರಗತಿ ಕುರಿತು ವಿಸ್ತೃತವಾಗಿ ಚರ್ಚಿಸಬೇಕು. ಯೋಜನೆಗಳನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಲಸಂಪನ್ಮೂಲ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಮಾತನಾಡಿ, ಗ್ರಾಮಗಳ ಸಮೀಪದಲ್ಲಿ ಹಾದುಹೋಗುವ ನದಿಗಳ ಪಾತ್ರಗಳ ಬಳಿ ತಡೆಗೋಡೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಕೃಷಿಹೊಂಡ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದ ಅಂತರ್ ಜಲ ವೃದ್ಧಿಯಾಗುವುದರ ಜೊತೆಗೆ ರೈತರಿಗೆ ಅನುಕೂಲವಾಗುತ್ತದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಯುಕೆಪಿಗೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರನ್ನು ನೇಮಕ ಮಾಡಬೇಕು. ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿ ಈ ಪ್ರಕ್ರಿಯೆಯು ತ್ವರಿತವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು ಎಂದು ಸಚಿವ ಕಾರಜೋಳ ಸಿಎಂಗೆ ಕೋರಿದರು.

ಓದಿ: ಸಂಧಾನ ಸಭೆ ಯಶಸ್ವಿ: ಆನಂದ್ ಸಿಂಗ್ ರಾಜೀನಾಮೆ ನೀಡಲ್ಲ ಎಂದ ಸಿಎಂ

ಈ ವೇಳೆ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಎನ್. ಲಕ್ಷಣ ರಾವ್ ಪೇಶ್ವೆ, ಯುಕೆಪಿಯ ಪುನರ್ ವಸತಿ ಮತ್ತು ನಿರ್ಮಾಣ ಯೋಜನೆಯ ಆಯುಕ್ತ ಶಿವಯೋಗಿ ಕಳಸದ ಯೋಜನೆಗಳ ಬಗ್ಗೆ ವಿವರಿಸಿದರು.

ABOUT THE AUTHOR

...view details