ಬೆಂಗಳೂರು: ದೇವರು ಎಲ್ಲವನ್ನೂ ಕೊಟ್ಟಾಗ ಅದರ ಮಹತ್ವ ತಿಳಿಯೋಲ್ಲ, ಕೊರತೆಯಾದಾಗಲೇ ಅದರ ಮಹತ್ವ ತಿಳಿಯಲು ಸಾಧ್ಯ. ಅಂತಹದ್ದೇ ಫಲಶೃತಿ ಜಯನಗರದ ಟೀ ಬ್ಲಾಕ್ ನಲ್ಲಿರುವ ಕೆಎಸ್ಆರ್‌ಟಿಸಿ ಆಸ್ಪತ್ರೆ. ಕೊರತೆಯಾದಾಗ ಹುಟ್ಟಿಕೊಂಡಿರುವ ಆಸ್ಪತ್ರೆ ಇದಾಗಿದ್ದು, ನಿರಂತರವಾಗಿ ಜನಸೇವೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಎಸ್ಆರ್‌ಟಿಸಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿಎಂ, ಬಡವರಿಗೆ-ಸಂಕಷ್ಟದಲ್ಲಿ ಇರುವವರಿಗೆ ಅನೇಕರು ಸಹಾಯ ಮಾಡಿದ್ದಾರೆ. ಹಾಗಾಗಿ ಅಚ್ಚುಕಟ್ಟಾಗಿ ಆಸ್ಪತ್ರೆ ನಡೆಸಿಕೊಂಡು ಹೋಗುವ ಕೆಲಸ ಆಗಬೇಕು ಎಂದು ಕಿವಿಮಾತು ಹೇಳಿದರು.
ಕೆಎಸ್ಆರ್ ಟಿಸಿ ಆಸ್ಪತ್ರೆ ಪುನರ್ ನಿರ್ಮಾಣವಾಗಿರುವುದು ಸಂತಸ ತಂದಿದೆ. ಶಾಸಕರು, ಸರ್ಕಾರ, ಬಿಬಿಎಂಪಿ, ಕಾರ್ಪೊರೇಟ್ ಸೆಕ್ಟರ್ ಎಲ್ಲರೂ ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿ ಅದೆಷ್ಟೋ ದುಡಿಯುವ ವರ್ಗ ಕೈಚೆಲ್ಲಿ ಕೂತಿದೆ. ಸಾಂಕ್ರಾಮಿಕದಿಂದ ಸಾವು-ನೋವು ಸಂಭವಿಸಿದ್ದರೂ ಮತ್ತೊಂದು ಕಡೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದೆ ಎಂದರು.