ಬೆಂಗಳೂರು: ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5,000 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದು ಬಿಟ್ಟು ವಿರೋಧಿಸುತ್ತಿರುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಿನ್ನೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಒದಗಿಸುವುದಾಗಿ ಅತ್ಯಂತ ಬದ್ಧತೆಯಿಂದಲೇ ಘೋಷಿಸಿದ್ದೇನೆ. ಕಳೆದ ವರ್ಷ 3,000 ಕೋಟಿ ರೂ. ಅನುದಾನ ಘೋಷಿಸಿದ್ದೆವು. ಅದನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಅವರು ವಿರೋಧಿಸಿರುವುದನ್ನು ನೋಡಿದರೆ, ಈ ಪ್ರದೇಶ ಸದಾ ಹಿಂದುಳಿದಿರಲಿ ಎಂಬುದೇ ಅವರ ಇಚ್ಛೆಯಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.