ಬೆಂಗಳೂರು :ಹಿಂದುಳಿದಿರುವ ಬಲಿಜ ಸಮಾಜವನ್ನು ಶಿಕ್ಷಣ, ಉದ್ಯೋಗದಲ್ಲಿ ಮುಂದೆ ತರುವ ಜೊತೆಗೆ ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೈವಾರ ತಾತಯ್ಯ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಯುಗ ಪುರುಷರು ಅಂತಾ ಯುಗಕ್ಕೆ ಒಬ್ಬರು ಹುಟ್ಟುತ್ತಾರೆ. ಸಮಾಜದಲ್ಲಿ ಸ್ಪಷ್ಟತೆ ಇಲ್ಲದೇ ಗೊಂದಲವಿದ್ದಾಗ ಇಂತಹ ಯುಗಪುರುಷರು ಹುಟ್ಟುತ್ತಾರೆ. ಅಂತಹ ಕರ್ನಾಟಕದ ಶ್ರೇಷ್ಠ ಯುಗಪುರುಷರು ಕೈವಾರದ ತಾತಯ್ಯ. ಜ್ಞಾನಿಗಳ ಜ್ಞಾನ ಬಂಡಾರ ಕೆಲವೊಮ್ಮೆ ಸಮಾಜಕ್ಕೆ ಮುಟ್ಟೋದಿಲ್ಲ. ಆದರೆ, ಸರಳವಾಗಿ ಸಾಮಾನ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಕೈವಾರ ತಾತಯ್ಯ ತಮ್ಮ ಕೀರ್ತನೆಗಳಿಂದ ಮಾಡಿದರು.
ಇವತ್ತು ಕೈವಾರ ತಾತಯ್ಯ ನಮ್ಮ ಮಧ್ಯೆ ನಮ್ಮ ನಡುವೆ ಇಲ್ಲ. ಆದರೆ, ಅವರ ತತ್ವಗಳು, ಕೀರ್ತನೆಗಳು, ವಿಚಾರಧಾರೆಗಳು ಇಂದಿಗೂ ಇವೆ. ಇದೇ ಅವರ ಜೀವಂತಿಕೆಗೆ ಸಾಕ್ಷಿ. ಕಾಲವನ್ನ ಮೀರಿ ಚಿಂತನೆ ಮಾಡುವವರಿಗೆ ಆತ ಅಮರ. ಸೂರ್ಯ- ಚಂದ್ರ ಇರುವವರಿಗೂ ಕೈವಾರ ತಾತಯ್ಯ ಇರ್ತಾರೆ. ಇಂತಹ ಕೈವಾರ ತಾತಯ್ಯರನ್ನ ಸದಾಕಾಲ ನೆನಪಿಡಬೇಕು ಅಂತಾ ಸರ್ಕಾರ ತನ್ನ ಕರ್ತವ್ಯ ಎಂದು ಭಾವಿಸಿ ಜನ್ಮದಿನೋತ್ಸವ ಆಚರಿಸುತ್ತಿದ್ದೇವೆ. ವೈಚಾರಿಕತೆಯ ಪ್ರಚಾರ ಮಾಡುವುದು ಕೂಡ ಸರ್ಕಾರದ ಕರ್ತವ್ಯ ಎಂದರು.
ಸಂಸದ ಪಿ. ಸಿ ಮೋಹನ್ ಸದಾ ಸಮಾಜದ ಹತ್ತಿರದಲ್ಲಿರುತ್ತಾರೆ. ಅವರು ಬಡವರ ಪರವಾಗಿ, ಸಮಾಜದ ಪರವಾಗಿ ಮನವಿಗಳನ್ನ ತರುತ್ತಿದ್ದರು. 2ಎಗೆ ಸೇರಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಪಿಸಿ ಮೋಹನ್. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಳಕಳಿಯಿಂದ ಹಾಗೂ ಪಿಸಿ ಮೋಹನ್ ಮೇಲಿನ ಪ್ರೀತಿಗಾಗಿ ಬಿ. ಎಸ್ ಯಡಿಯೂರಪ್ಪ ಸ್ಪಂದಿಸಿ 2ಎಗೆ ಬಲಿಜ ಸಮುದಾಯವನ್ನು ಸೇರಿಸಿದರು.
ಹಿಂದುಳಿದ ವರ್ಗ ಒಂದು ಜಾತಿಗೆ ಸೀಮಿತವಲ್ಲ. ಬಡತನ ಶಿಕ್ಷಣ ಕೊರತೆ ಇರುವ ಒಂದು ವರ್ಗವಿದು. ಅದರ ಅಭಿವೃದ್ಧಿಯೇ ನಮ್ಮ ನಾಡು, ದೇಶದ ಅಭಿವೃದ್ಧಿ. ನಮ್ಮ ದೇಶದ ಸಂಸ್ಕೃತಿ ಬಹಳ ವೈಶಿಷ್ಟ್ಯವಾದದ್ದು. ದೇಶದಲ್ಲಿ ತತ್ವಜ್ಞಾನಿಗಳು ಹುಟ್ಟಿರುವ ಪುಣ್ಯಭೂಮಿ ಇದು. ಭಕ್ತಿಯ ಕ್ರಾಂತಿ ಆಗಿರುವುದು ನಮ್ಮ ದೇಶದಲ್ಲಿ ಮಾತ್ರ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗಬೇಕು. ಹಿಂದುಳಿದ ಶ್ರೇಯೋಭಿವೃದ್ಧಿಯೇ ನಮ್ಮ ಕೆಲಸ. ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯ ಮಾಡುತ್ತೇನೆ ಅನ್ನೋದನ್ನ ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.