ಬೆಂಗಳೂರು :ಜನರು ಇರುವ ಕಡೆ ಹೋಗಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಬಡವರಿಗೆ ನೆರವು ಕೊಡುವ ಕೆಲಸ ಮಾಡಬೇಕು. ಗ್ರಾಮಗಳಿಗೆ ಭೇಟಿ ಕೊಡಲು ನಿರ್ದೇಶನ ನೀಡಲಾಗಿದೆ. ಆಡಳಿತ ಚುರುಕಿಗೆ ಆದೇಶಿಸಲಾಗಿದೆ ಎಂದರು.
ಡಿಸಿಗಳ ಪಾತ್ರ ದೊಡ್ಡದಿದೆ. ಜಿಲ್ಲಾಧಿಕಾರಿಗಳಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಾಗಿ ಡಿಸಿಗಳು ಕೆಲಸ ಮಾಡುತ್ತಾರೆ. ಡಿಸಿಗಳು ಅಧಿಕಾರದ ಬಹುಮುಖ್ಯ ಕೊಂಡಿಯಾಗಿದ್ದಾರೆ. ಅವರ ಆಡಳಿತದ ಮೇಲೆ ಬಹಳಷ್ಟು ಅವಲಂಬನೆ ಇದೆ. ಡಿಸಿಗಳಿಗೆ ಜನಸ್ಪಂದನೆಯಾಗಿ ಕೆಲಸ ಮಾಡಬೇಕು. ಕೆಲವರ ಹಿತಕ್ಕಾಗಿ ಬೇಡ, ಜನರ ಹಿತಕ್ಕಾಗಿ ಕೆಲಸ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.
ರೈತರ ಬಾಕಿ ಬೆಳೆ ಪರಿಹಾರ ಕೊಡಲು ಸೂಚನೆ ನೀಡಲಾಗಿದೆ. ಪರಿಹಾರ ಸಂಬಂಧ ಮಾಹಿತಿ ಆ್ಯಪ್ನಲ್ಲಿ ಅಪ್ಲೋಡ್ಗೆ ಸೂಚಿಸಲಾಗಿದೆ. ಜನವರಿ 7ರವರೆಗೆ ಗಡುವು ಕೊಡಲಾಗಿದೆ. 2019-20ರಲ್ಲಿ ಕೆಲವರು ಮನೆಗಳ ನಿರ್ಮಾಣ ಆರಂಭ ಮಾಡಿಲ್ಲ. ಇನ್ನೊಮ್ಮೆ ಜಿಪಿಎಸ್ ಮೂಲಕ ಪರಿಶೀಲನೆಗೆ ಸೂಚಿಸದ್ದೇನೆ. ಸ್ಥಳ ಬದಲಾಯಿಸಿ ಇನ್ನೊಂದೆಡೆ ಅವರದೆ ಸ್ಥಳದಲ್ಲಿ ಮನೆ ಕಟ್ಟೋದಾದ್ರೆ ಅನುಮತಿಸಲು ಸೂಚನೆ ನೀಡಿದ್ದೇನೆ ಎಂದರು.
ನನೆಗುದಿಗೆ ಬಿದ್ದಿರುವ ಹಲವು ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಅಕ್ರಮ ಸಕ್ರಮ ಬಗ್ಗೆಯೂ ಚರ್ಚೆಯಾಗಿದೆ. ಗೋಮಾಳಗಳ ಸಕ್ರಮ ಬಗ್ಗೆ ಚರ್ಚಿಸಿದ್ದೇವೆ. ಸಕ್ರಮಕ್ಕೆ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು. ಇವುಗಳ ಕಡತ ವಿಲೇವಾರಿ ಜವಾಬ್ದಾರಿ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.