ಬೆಂಗಳೂರು :ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ಬಗ್ಗೆ ಭರವಸೆ ನೀಡಿದರು.
ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ ಇದೆ, ದೇಶದಲ್ಲಿ ಕರ್ನಾಟಕ ಪೊಲೀಸ್ ನಂಬರ್-1 ಸ್ಥಾನಕ್ಕೆ ಏರಲಿ ಎಂದು ಹಾರೈಸಿದರು.
ಅಂತಃಕರಣ, ಮಾನವೀಯತೆ ಬಹಳ ಮುಖ್ಯ :ನಾಡಿನ, ಜನರ ರಕ್ಷಣೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಇಲಾಖೆಯಲ್ಲಿ ಶಿಸ್ತು, ದಕ್ಷತೆ, ನಿಷ್ಠೆ ಬಹಳ ಮುಖ್ಯ. ಚುನಾವಣೆ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಆದ್ಯತೆ ನೀಡುತ್ತಾರೆ.
ನಿಷ್ಪಕ್ಷಪಾತ, ಮಾನವೀಯತೆ, ಅಂತಃಕರಣ ಹಾಗೂ ನಿಸ್ಪೃಹ ಕರ್ತವ್ಯಕ್ಕೆ ನಮ್ಮ ಪೊಲೀಸ್ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್, ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್ವುಳ್ಳ ಠಾಣೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲಿಯೂ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.