ಯಲಹಂಕ(ಬೆಂಗಳೂರು) :ಬೆಂಗಳೂರು ಸುತ್ತಮುತ್ತ ಹೆಚ್ಚಾಗಿ ಬೆಳೆಯುವ ಮಾವಿನ ಹಣ್ಣು ದೆಹಲಿ ಮಾರುಕಟ್ಟೆಗೆ ಹೋಗಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಾವಿನ ಹಣ್ಣನ್ನು ಚಿಂತಾಮಣಿಯಿಂದ ದೆಹಲಿಯ ಆದರ್ಶ್ ನಗರಕ್ಕೆ ಕಿಸಾನ್ ರೈಲಿನ ಮೂಲಕ ಸಾಗಿಸಲಾಗುವುದು. ಎರಡು ದಿನಕ್ಕೊಮ್ಮೆ 250 ಟನ್ ಮಾವಿನ ಹಣ್ಣುಗಳನ್ನು ಹೊತ್ತ ಕಿಸಾನ್ ರೈಲು ದೆಹಲಿಯ ಆದರ್ಶ್ ನಗರಕ್ಕೆ ತಲುಪಲಿದೆ. ಇದರಿಂದ ರೈತರಿಗೆ ಪ್ರತಿ ಕೆಜಿ ಮಾವಿನ ಹಣ್ಣಿಗೆ 10 ರೂಪಾಯಿ ಅಧಿಕ ಬೆಲೆ ಸಿಗಲಿದೆ.
ಇಂದು ಯಲಹಂಕ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವಿನ ಹಣ್ಣು ಸಾಗಿಸುವ 'ಕಿಸಾನ್ ರೈಲಿ'ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ಪ್ರಮುಖ ಪಾತ್ರವಹಿಸಿದೆ.
ಕೃಷಿ ಉತ್ಪನ್ನಗಳಿಗೆ ದೂರದ ಮಾರುಕಟ್ಟೆಗಳ ಸಂಪರ್ಕ ಸಿಗುವಂತೆ ಮಾಡಿ ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆಯೆಂದು ಹೇಳಿದ ಸಿಎಂ, ಕಿಸಾನ್ ರೈಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕಿಸಾನ್ ರೈಲು ಆಗಸ್ಟ್ 2020ರಿಂದ ಪ್ರಾರಂಭಗೊಂಡಿದೆ. ರೈತರಿಗೆ, ಕೃಷಿ ಉತ್ಪನ್ನದ ವರ್ತಕರಿಗೆ, ರಫ್ತುದಾರರಿಗೆ ಪ್ರಯೋಜನಕಾರಿಯಾಗಿದೆ. ಕಿಸಾನ್ ರೈಲಿನಲ್ಲಿ ಕೃಷಿ ಉತ್ಪನ್ನಗಳ ರೈಲ್ವೆ ಸಾಗಾಣಿಕೆ ದರದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುತ್ತದೆ. ಇದರಿಂದ ರೈತರಿಗೆ ರಸ್ತೆ ಮೂಲಕ ಸಾಗಾಣಿಕೆ ಮಾಡಿದ್ದಕಿಂತಲೂ ಅತ್ಯಂತ ಕಡಿಮೆ ದರದಲ್ಲಿ ಸಾಗಾಣಿಕೆ ಮಾಡಲು ಅನುಕೂಲವಾಗಿದೆ ಎಂದರು.
ಏನಿದು ಕಿಸಾನ್ ರೈಲು?
ರೈತರ ಆದಾಯ ದ್ವಿಗುಣ ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಕಿಸಾನ್ ರೈಲು. ಕೃಷಿ ಉತ್ಪನ್ನ ಮತ್ತು ಬೇಗನೆ ಹಾಳಾಗುವ ವಸ್ತುಗಳನ್ನು ಉತ್ಪಾದನಾ ಸ್ಥಳದಿಂದ ದೇಶದ ವಿವಿಧ ಭಾಗಗಳಿಗೆ ಸಾಗಿಸಲು 2020-21ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಹಾಲು, ಮಾಂಸ, ಮೀನು, ಹಣ್ಣು ಮತ್ತು ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳನ್ನು ದೇಶದ ವಿವಿಧೆಡೆ ಸಾಗಿಸಲು ಭಾರತೀಯ ರೈಲ್ವೆ ಅನುಕೂಲವಾಗಿದೆ. ರೈತರು ಸಬ್ಸಿಡಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ದೇಶದ ವಿವಿಧ ಭಾಗದ ಮಾರುಕಟ್ಟೆಗೆ ಕಿಸಾನ್ ರೈಲು ಮೂಲಕ ಸಾಗಿಸಬಹುದಾಗಿದೆ.