ಬೆಂಗಳೂರು: ಕೊರೊನಾ ಭೀತಿ ಇರುವ ಕಾರಣಕ್ಕೆ ಸಾಮೂಹಿಕ ಹೋಳಿಯಾಟದಿಂದ ದೂರ ಇರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ನಾಡಿನ ಸಮಸ್ತ ಜನರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಓಕುಳಿಯ ರಂಗು ನಮ್ಮೆಲ್ಲರ ಬಾಳನ್ನು ಅರ್ಥಪೂರ್ಣವಾಗಿ ತುಂಬಲಿ. ಬಣ್ಣ ಮೈಮೇಲಿರುವುದಕ್ಕಿಂತ ಮುಖ್ಯವಾಗಿ ಬದುಕಿನಲ್ಲಿರಲಿ. ಸುರಕ್ಷಿತ ಆಚರಣೆಗೆ ಮಹತ್ವ ಕೊಡೋಣ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರೋಣ ಎಂದಿದ್ದಾರೆ.
ಇನ್ನು ಆರೋಗ್ಯ ಸಚಿವ ಶ್ರೀ ರಾಮುಲು ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಕೆಲವೊಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ವೈರಸ್ ಹರಡದಂತೆ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ. ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಮಹಾನಿರ್ದೇಶನಾಲಯ, ಭಾರತ ಸರ್ಕಾರದ ನಿರ್ದೇಶನದಂತೆ ಕೆಮ್ಮು, ಶೀತ, ನೆಗಡಿ ಹಾಗೂ ಉಸಿರಾಟದಲ್ಲಿ ತೊಂದರೆ ಇದ್ದು ಮತ್ತು ಕಳೆದ 14 ದಿನಗಳಲ್ಲಿ ಕೊರೊನಾ ಬಾಧಿತ ದೇಶಗಳಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಅಥವಾ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ ಮಾತ್ರ ಬೇಕಾದ ಅಗತ್ಯ ರಕ್ತ ಪರೀಕ್ಷೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.