ಕರ್ನಾಟಕ

karnataka

ETV Bharat / state

ಬಸವಕಲ್ಯಾಣ,ಸಂಗೊಳ್ಳಿ ರಾಯಣ್ಣ,ಕಾಗಿನೆಲೆ ಅಭಿವೃದ್ಧಿ ಮಂಡಳಿ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಅನುಮೋದನೆ - anubhava mantapa project

ಇಂದು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸಿಎಂ ಬಿ ಎಸ್​ ಯಡಿಯೂರಪ್ಪ ಸಭೆ ನಡೆಸಿದ್ದು, ಈ ಎಲ್ಲಾ ಪ್ರಾಧಿಕಾರಗಳ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

projects
21-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ

By

Published : Jul 12, 2021, 6:57 PM IST

ಬೆಂಗಳೂರು:ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ 2021-22 ನೇ ಸಾಲಿನ ಕ್ರಿಯಾ ಯೋಜನೆಗೆ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 14 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಹಾಗೂ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರಕ್ಕೆ 21-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮೂರು ಪ್ರಾಧಿಕಾರಗಳ ಸಭೆ ನಡೆಯಿತು. ಮೊದಲು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಸಭೆ

ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ 134 ಕಾಮಗಾರಿಗಳ ಪೈಕಿ ಈವರೆಗೆ 76 ಕಾಮಗಾರಿಗಳು ಪೂರ್ಣಗೊಂಡಿದ್ದು, 58 ಕಾಮಗಾರಿಗಳು ಬಾಕಿ ಇವೆ. ಒಟ್ಟು 500 ಕೋಟಿ ರೂ ವೆಚ್ಚದ ಅನುಭವ ಮಂಟಪ ಯೋಜನೆಗೆ ಸರ್ಕಾರ 200 ಕೋಟಿ ರೂ ಹಂಚಿಕೆ ಮಾಡಿದೆ. 101 ಎಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಹನ್ನೊಂದು ಎಕರೆ 25 ಗುಂಟೆ ಉಚಿತವಾಗಿ ಲಭ್ಯವಿದ್ದು, 69 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಈ ಭೂಮಿಯ ಮಾಲೀಕರು ಹೆಚ್ಚು ಪರಿಹಾರ ಬಯಸಿದ್ದು, ಮಾರುಕಟ್ಟೆ ದರದಲ್ಲಿ ಪರಿಹಾರ ಕೇಳುತ್ತಿದ್ದಾರೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಪರಸ್ಪರ ಸಂಧಾನ ನಡೆಸಿ ರೈತರ ಸಮ್ಮತಿ ಪಡೆದು ಭೂ ಸ್ವಾಧೀನ ಪ್ರಕ್ರಿಯೆ ಜರುಗಿಸುವಂತೆ ಮುಖ್ಯಮಂತ್ರಿಗಳು ಸಲಹೆ ಮಾಡಿದರು. ರೈತರ ಒಪ್ಪಿಗೆ ಮೇರೆಗೆ ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ ಸಭೆಯೊಂದನ್ನು ಆಯೋಜಿಸಲು ಸೂಚಿಸಿದರು.

ಈ ವರ್ಷ ಬಜೆಟ್ ನಲ್ಲಿ ಲಭ್ಯವಿರುವ 10 ಕೋಟಿ ರೂ. ಸೇರಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ ಸಿಎಂ,‌ ಪ್ರಸ್ತುತ ಲಭ್ಯವಿರುವ ಭೂಮಿಯಲ್ಲಿ ಮಣ್ಣಿನ ಪರೀಕ್ಷೆ ಮತ್ತು ಇತರ ಕಾಮಗಾರಿಗಳು ನಡೆದಿವೆ. ಇನ್ನು ಭೂಸ್ವಾಧೀನ ಪ್ರಕ್ರಿಯೆ ಜೊತೆಜೊತೆಗೆ ಡಿಪಿಆರ್ ಹಾಗೂ ಇತರೆ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಕಾಗಿನೆಲೆ ಪ್ರಾಧಿಕಾರದ ಸಭೆ:

ನಂತರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಕೂಡ ಇಂದು ನಡೆಯಿತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 14 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಭೆ ಅನುಮೋದನೆ ನೀಡಿದ್ದು, ಕಾಗಿನೆಲೆಯಲ್ಲಿ ನಿರ್ಮಾಣ ಪೂರ್ಣಗೊಳಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಶೀಘ್ರ ಉದ್ಘಾಟಿಸಲು ನಿರ್ಧರಿಸಲಾಯಿತು.

21-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ

ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ:

ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ಇಂದು ನಡೆದಿದ್ದು, 21-22ನೇ ಸಾಲಿನ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಇರುವ ಬಿಲ್​ಗಳ 22 ಕೋಟಿ ರೂ ವೆಚ್ಚ ಪಾವತಿ ಮಾಡಲು ಅನುಮೋದನೆ ನೀಡಲಾಯಿತು.

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್​ನಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 62 ಕೋಟಿ ರೂ. ಗಳನ್ನು ಒದಗಿಸಿದೆ. 279 ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆಯನ್ನು ಪ್ರಾಧಿಕಾರ ರೂಪಿಸಿದ್ದು, 2017ರಿಂದ ಈವರೆಗೆ 159 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ರಾಯಣ್ಣನ ಜನಸ್ಥಳದಲ್ಲಿ ಸೈನಿಕ ಶಾಲೆ ಪೂರ್ಣಗೊಂಡಿದೆ. ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಶಾಲೆಯ ಆರಂಭಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು. ಸೈನಿಕ ಶಾಲೆ ಆರಂಭಕ್ಕೆ ಅನುಮೋದನೆ ಹುದ್ದೆಗಳ ಮಂಜೂರಾತಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಂದಘಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಮತ್ತು ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿಗಳು ಜರುಗಿದ್ದು ಈ ವರ್ಷವೇ ಅವುಗಳನ್ನು ಪೂರ್ಣಗೊಳಿಸುವತೆ ಸೂಚಿಸಲಾಯಿತು.

ಕಳೆದ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಪ್ರಾಧಿಕಾರ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಜರುಗಿದ್ದವು. ಮುಂದುವರಿಕೆ ಭಾಗವಾಗಿ ಇಂದು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆಗಳು ಜರುಗಿ ಈ ಎಲ್ಲಾ ಪ್ರಾಧಿಕಾರಗಳ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅನುಮೋದನೆ ನೀಡಲಾಗಿದೆ.

ABOUT THE AUTHOR

...view details