ಬೆಂಗಳೂರು: ಗ್ರೀನ್ ಮತ್ತು ಆರೆಂಜ್ ಝೋನ್‌ಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಲಿರೋ ಹಿನ್ನೆಲೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಅನುಮತಿ ನೀಡಬೇಕೆಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.
ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೇಲೆ ಅನೇಕ ಕುಟುಂಬಗಳು ಅವಲಂಬಿತವಾಗಿದ್ದು, ಮೇ 11ರಿಂದ ಶೂಟಿಂಗ್ ಪ್ರಾರಂಭಿಸಲು ರಾಜ್ಯ ಸರ್ಕಾರದ ವತಿಯಿಂದ ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಮೇ 4ರಂದು ರಾಜ್ಯದಲ್ಲಿ ಗ್ರೀನ್ ಮತ್ತು ಆರೆಂಜ್ ಝೋನ್‌ಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಆಗುತ್ತಿದೆ. ಹೀಗಾಗಿ, ಟಿವಿ ಕ್ಷೇತ್ರಕ್ಕೂ ಸಡಿಲಿಕೆ ಮಾಡಿ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ರೆ ಒಳ್ಳೆಯದಾಗುತ್ತೆ. 120 ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ ಎಂದಿದ್ದಾರೆ.
ಹೀಗಾಗಿ, ನಮ್ಮ ಕ್ಷೇತ್ರಕ್ಕೆ ಅನುಮತಿಯ ಅವಶ್ಯಕತೆ ಇದೆ. ನೀವು ಅನುಮತಿ ನೀಡಿದ್ರೆ, ಆ ಕುಟುಂಬಗಳು ನಿರಾಳವಾಗಿ ಜೀವನ ಸಾಗಿಸಲು ಅನುವು ಮಾಡಿಕೊಟ್ಟ ಹಾಗಾಗುತ್ತದೆ. ಸರ್ಕಾರ ಅನುಮತಿ ನೀಡಿದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲಾಗುತ್ತದೆ. ಶೂಟಿಂಗ್ ಲೊಕೇಷನ್‌ಗಳಲ್ಲಿ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಸೇರದ ಹಾಗೆಯೂ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.