ಬೆಂಗಳೂರು:ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಆಯೋಜಿಸಲಾಗಿದ್ದ ಐಟಿ-ಬಿಟಿ ಕ್ಷೇತ್ರದ ದಿಗ್ಗಜರ ಸಮಾಲೋಚನಾ ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವಂತೆ ಕೈಗಾರಿಕೋದ್ಯಮಿಗಳಿಗೆ ಸಿಎಂ ಮನವಿ
ರಾಜ್ಯದಲ್ಲಿ ಸಂಭವಿಸಿರುವ ನೆರೆಯಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರದ ಅನುದಾನ ವಿಳಂಬವಾಗುತ್ತಿರುವ ಹಿನ್ನಲೆ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐಟಿ-ಬಿಟಿ ಕಂಪನಿಗಳ ಮೊರೆ ಹೋಗಿದ್ದಾರೆ.
ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಈಗಾಗಲೇ 87 ಜನ ಮೃತಪಟ್ಟಿದ್ದಾರೆ. 1.50 ಲಕ್ಷ ಮನೆ ಸರ್ವನಾಶವಾಗಿದ್ದು, 2.47 ಲಕ್ಷ ಮನೆ ಹಾನಿಗೊಂಡಿವೆ. 15,119 ಕೋಟಿ ಬೆಳ ನಾಶವಾಗಿದೆ. ಒಟ್ಟಾರೆ 38,451 ಕೋಟಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಐಟಿ, ಬಿಟಿ ಕ್ಷೇತ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.
ಕರ್ನಾಟಕ ಸರ್ಕಾರ ಐಟಿ-ಬಿಟಿಯ ಎಲ್ಲಾ ಉದ್ಯಮಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಸಂಕಷ್ಟದ ಸ್ಥಿತಿಯಲ್ಲಿ ನೀವೆಲ್ಲಾ ಸರ್ಕಾರದ ಜೊತೆಯಲ್ಲಿರಬೇಕು. ಸರ್ಕಾರ ನಿಮ್ಮ ಜೊತೆ ಇರಲಿದೆ. ಐಟಿ-ಬಿಟಿ ಕ್ಷೇತ್ರ ಲಾಭ ಗಳಿಕೆಯ ಉದ್ಯಮ. ನಿಮ್ಮಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ತಕ್ಷಣ ಆರ್ಥಿಕ ನೆರವಿನ ಅಗತ್ಯವಿದೆ. ನಿಮ್ಮ ನಿಮ್ಮ ವ್ಯಾಪ್ತಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡಿ ಎಂದು ಸಿಎಂ ಬಿಎಸ್ವೈ ಮನವಿ ಮಾಡಿದರು.