ಬೆಂಗಳೂರು: ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಸಿಗುವವರೆಗೂ ತಮಿಳುನಾಡಿನ ಲಿಂಕ್ ಯೋಜನೆಗೆ ಎರಡನೇ ಹಂತದ ಕ್ಲಿಯರೆನ್ಸ್ ನೀಡದಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಬಂದ ಕೂಡಲೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. 2-3 ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಡಿ.6ರಂದು ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ರಾಷ್ಟ್ರೀಯ ಯೋಜನೆ ಅಂತಿಮಗೊಳಿಸಬೇಕು ಎಂದು ಚರ್ಚೆ ಮಾಡಿದ್ದೇನೆ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಗೋದಾವರಿ, ಕಾವೇರಿ, ಕೃಷ್ಣಾ ಮತ್ತು ಮಹಾನದಿ ಜೋಡಣೆ ಕುರಿತು ನಮ್ಮ ಅಹವಾಲು ಆಲಿಸದೇ ಡಿಪಿಆರ್ ಮಾಡಬಾರದು ಎಂದು ಹೇಳಿದ್ದೇನೆ ಮತ್ತು ತಮಿಳುನಾಡಿನ ಲಿಂಕ್ ಯೋಜನೆಗೆ ನಮ್ಮ ಮೇಕೆದಾಟು ಯೋಜನೆ ಕ್ಲಿಯರ್ ಆಗುವವರೆಗೂ ಅವರಿಗೆ ಮುಂದಿನ ಕ್ಲಿಯರೆನ್ಸ್ ನೀಡದಂತೆ ಕೇಳಿದ್ದೇನೆ ಈ ಸಂಬಂಧ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆ ಎಂದರು.
ಬೂಸ್ಟರ್ ಡೋಸ್ ಚರ್ಚೆ:
ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಭೇಟಿ ಮಾಡಿದ್ದು, ಕೊರೊನಾ ನಿರ್ವಹಣೆ ಮತ್ತು ಈಗಿರುವ ಹೊಸ ಪ್ರಭೇದ ಒಮಿಕ್ರೋನ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕ ಬಹಳ ಒಳ್ಳೆ ರೀತಿಯಲ್ಲಿ ಕೊರೊನಾ ನಿಯಂತ್ರಣ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ ಮಾಡಿದ್ದು, ಇಲ್ಲಿರುವ ತಜ್ಞರ ಸಮಿತಿ ಜೊತೆ ಚರ್ಚಿಸಿ ನಂತರ ತೀರ್ಮಾನವನ್ನು ರಾಜ್ಯ ಸರ್ಕಾರಗಳಿಗೆ ಹೇಳಲಿದ್ದೇವೆ, ನಾವು ಕೂಡ ಇತ್ತೀಚಿನ ಬೆಳವಣಿಗೆಯಿಂದ ಎಲ್ಲವನ್ನೂ ಅವಲೋಕನ ಮಾಡುತ್ತಿದ್ದೇವೆ ಇದನ್ನೆಲ್ಲಾ ನೋಡಿಕೊಂಡು ತಜ್ಞರ ಸಮಿತಿ ಜೊತೆಗೆ ಚರ್ಚಿಸಿ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ ಎಂದರು.