ಕರ್ನಾಟಕ

karnataka

ETV Bharat / state

ನಕಲಿ ಬೀಜಗಳ ಬಗ್ಗೆ ರೈತರು ಎಚ್ಚರ ವಹಿಸಬೇಕು: ಸಿಎಂ ಮನವಿ

ರಾಜ್ಯದಲ್ಲಿ ತಲೆ ಎತ್ತುತ್ತಿರುವ ನಕಲಿ ಬೀಜಗಳ ಹಾವಳಿ ಬಗ್ಗೆ ರೈತರು ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಮನವಿ ಮಾಡಿದ್ದಾರೆ. ಇದೇ ವೇಳೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಅಪಾರ ಪ್ರಮಾಣದ ಮೆಕ್ಕೆಜೋಳ ಬೀಜದ ದಾಸ್ತಾನುಗಳ ವಿವರ ಸಹ ನೀಡಿದರು.

CM appeals for farmers to beware of fake seeds
ಸಿಎಂ ಯಡಿಯೂರಪ್ಪ ಮನವಿ

By

Published : Apr 25, 2020, 5:09 PM IST

ಬೆಂಗಳೂರು: ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ಅನುಮೋದಿತ ಬೀಜಗಳ ಮೇಲೆ ಅವಲಂಬಿತವಾಗಿರುವವರು ನಕಲಿ ಬೀಜಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ಮೇರೆಗೆ ಏ. 24ರಂದು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಗೋಡೌನ್​ಗಳ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಮೆಕ್ಕೆಜೋಳ ಬೀಜದ ದಾಸ್ತಾನು ವಶಪಡಿಸಿಕೊಂಡಿದ್ದು, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಕಲಿ ಬೀಜ ಮಾರಾಟಗಾರರ ಜಾಲ ಪತ್ತೆ ಹಚ್ಚಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಶೀಥಲೀಕರಣ ಘಟಕಗಳಿಂದ ಸುಮಾರು 7026 ಕ್ವಿಂಟಾಲ್ ಮತ್ತು ಧಾರವಾಡ ಜಿಲ್ಲೆಯಲ್ಲಿ 270.60 ಕ್ವಿಂಟಾಲ್, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ 70 ಕ್ವಿಂಟಾಲ್ ಸೇರಿ ಒಟ್ಟು 7366 ಕ್ವಿಂಟಾಲ್ ಬೀಜಗಳ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ 10 ಕೋಟಿಗಳಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಸಚಿವರ ಶ್ರಮ ಮತ್ತು ರೈತಪರ ಕಾಳಜಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ನಕಲಿ ಬೀಜ ದಾಸ್ತಾನುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಸುಮಾರು 10-11 ಜಿಲ್ಲೆಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವ ರೈತರು ದೃಢೀಕರಿಸಿದ ಬೀಜಗಳ ಮೇಲೆ ಅವಲಂಬಿತರಾಗಿದ್ದಾರೆ. ರೈತರು ದೃಢೀಕರಣಗೊಂಡ ಮತ್ತು ಅನುಮೋದಿತ ಬೀಜಗಳನ್ನು ಖರೀದಿ ಮಾಡಿ, ಬಿಡಿ ಬೀಜಗಳನ್ನು ಖರೀದಿ ಮಾಡಬಾರದು ಎಂದು ಸೂಚಿಸಿದ್ದಾರೆ.

ಸರ್ಕಾರ ನಕಲಿ ಬೀಜ ಮತ್ತು ಕೀಟನಾಶಕ ಔಷಧಿಗಳ ಮಾರಾಟಗಾರರ ಮಾಫಿಯಾವನ್ನು ಹತ್ತಿಕ್ಕಲು ದೃಢ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದಲ್ಲಿ ನಕಲಿ ಬೀಜ ಮತ್ತು ಕೀಟನಾಶಕ ಔಷಧಿಗಳ ಮಾರಾಟವನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುತ್ತದೆ ಎಂದು ಸಿಎಂ ರೈತರಿಗೆ ಭರವಸೆ ನೀಡಿದ್ದಾರೆ.

ABOUT THE AUTHOR

...view details