ಬೆಂಗಳೂರು: ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಎಂ, ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ. ಅನಾಥ ಮಕ್ಕಳಿಗೆ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಅದರಂತೆ ಬಾಲ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಅನಾಥ ಮಕ್ಕಳಿಗೆ ಮಾಸಿಕ 3,500 ರೂ. ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ವಿಸ್ತೃತ ಕುಟುಂಬದ ಮಕ್ಕಳ ಆರೈಕೆಗೆ ಮಾಸಿಕ 3,500 ಸಹಾಯ ಧನ ನೀಡಲಾಗುತ್ತದೆ. 10ನೇ ತರಗತಿ ಮುಗಿಸಿದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್ಟ್ಯಾಪ್, ಟ್ಯಾಬ್ ನೀಡಲಾಗುತ್ತದೆ. 21 ವರ್ಷದ ಹೆಣ್ಣುಮಕ್ಕಳಿಗೆ 1 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ. ಮಾದರಿ ವಸತಿ ಶಾಲೆಗಳಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದರು.
ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿದರೆ ಪಾಲನಾ ಸಂಸ್ಥೆಯಲ್ಲಿ ಪೋಷಣೆ ಮಾಡಲಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಕಸ್ತೂರಬಾ ಶಾಲೆಗಳಂಥ ಮಾದರಿ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದರು.