ಬೆಂಗಳೂರು:ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಮೂವರು ಯುವಕರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ. ಅವರನ್ನು ನಂಬಿದ್ದ ಕುಟುಂಬಗಳೀಗ ಸಂಕಷ್ಟಕ್ಕೆ ಸಿಲುಕಿದ್ದು, ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಯಶ್ ಅಭಿಮಾನಿಗಳ ದಾರುಣ ಸಾವು ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್, ನಿನ್ನೆ ಮಧ್ಯರಾತ್ರಿ ಲಕ್ಷ್ಮೇಶ್ವರದ ಸೂರಣಗಿಯಲ್ಲಿ ಈ ದುರಂತ ನಡೆದಿದೆ. ಯಶ್ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಹಿನ್ನೆಲೆ ಫ್ಲೆಕ್ಸ್ ನಿಲ್ಲಿಸಬೇಕು ಅಂತ ರಾಡ್ ಇಟ್ಟುಕೊಂಡಿದ್ದರು. ರಾಡ್ ಕೆಇಬಿ ಲೈನ್ಗೆ ತಾಗಿ ಅಸುನೀಗಿದ್ದಾರೆ. ಮೂರು ಜನರಿಗೆ ತೀವ್ರವಾದ ಗಾಯಗಳಾಗಿದೆ. ಲಕ್ಷ್ಮೇಶ್ವರ ಆಸ್ಪತ್ರೆಗೆ ಒಬ್ಬರನ್ನು ದಾಖಲಿಸಲಾಗಿದೆ. ಇನ್ನೂ ಇಬ್ಬರನ್ನು ಕಿಮ್ಸ್ಗೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಅತ್ಯಂತ ದುರ್ದೈವದ ಘಟನೆ. ಅವರ ಕುಟುಂಬಗಳಿಗೆ ಭಗವಂತ ದುಃಖ ತಡೆಯುವ ಶಕ್ತಿಕೊಡಲಿ. ಆಸ್ಪತ್ರೆಯಲ್ಲಿ ಇರುವವರು ಬೇಗ ಗುಣಮುಖರಾಗಲಿ ಎಂದರು.
ಇದನ್ನೂ ಓದಿ:ಗದಗ: ಯಶ್ ಬರ್ತ್ಡೇ ಕಟೌಟ್ ನಿಲ್ಲಿಸುತ್ತಿದ್ದಾಗ ದುರಂತ; ವಿದ್ಯುತ್ ತಗುಲಿ ಮೂವರು ಯುವಕರು ಸಾವು