ಬೆಂಗಳೂರು:ಸಂಘ ಪರಿವಾರದ ಹಿರಿಯ ನಾಯಕ, ಬಿಜೆಪಿ ನೇತಾರ ರಾಜೇಂದ್ರ ಗೋಖಲೆ ನಿಧನಕ್ಕೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟ ಸದಸ್ಯರು ಮತ್ತು ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ರಾಜೇಂದ್ರ ಗೋಖಲೆ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸಂಘ ಕುಟುಂಬದವರಾಗಿದ್ದ ಗೋಖಲೆಯವರು ಪೂರ್ವಾಂಚಲ ಭಾಗದಲ್ಲಿ ಎಬಿವಿಪಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಅತ್ಯುತ್ತಮವಾಗಿ ಸಂಘಟನೆಯನ್ನು ಸಂಯೋಜಿಸಿದ್ದರು. ಬಿಜೆಪಿಯ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರಾಜೇಂದ್ರ ಗೋಖಲೆ ರಾಜೇಂದ್ರ ಅವರು ಸರಳ ಹಾಗೂ ಸ್ನೇಹ ಜೀವಿಯಾಗಿದ್ದರು. ಅವರೊಂದಿಗಿನ ಆತ್ಮೀಯ ಒಡನಾಟವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.
ಸಿಎಂ ಸಂತಾಪ:
ನನ್ನ ಆತ್ಮೀಯ ಮಿತ್ರ ಹಾಗೂ ಒಬ್ಬ ಹಿರಿಯ ಸಂಘಟನಾಕಾರರು ಆದ ರಾಜೇಂದ್ರ ಗೋಖಲೆ ಅವರ ಅಕಾಲಿಕ ಮರಣ ನನಗೆ ಬಹಳ ದೊಡ್ಡ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸವರಾಜ ಹೊರಟ್ಟಿ ಸಂತಾಪ :
ಸಂಘ ಪರಿವಾರದ ಹಿರಿಯ ನಾಯಕ, ಬಿಜೆಪಿ ನೇತಾರ ರಾಜೇಂದ್ರ ಗೋಖಲೆ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಎಬಿವಿಪಿ ಮೂಲಕ ಸಮಾಜ ಸೇವೆ ಆರಂಭಿಸಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೆಸರುವಾಸಿದ್ದ ರಾಜೇಂದ್ರ ಗೋಖಲೆ ಅವರು ಸಂಘಟನೆಯ ಕಷ್ಟ ಕಾಲದಲ್ಲಿ ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಅಸ್ಸೋಂನಲ್ಲಿ 8 ವರ್ಷಗಳ ಕಾಲ ಎಬಿವಿಪಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ ಹಿರಿಮೆ ಅವರದ್ದಾಗಿದೆ ಎಂದು ಸಭಾಪತಿ ಹೊರಟ್ಟಿ ಬಣ್ಣಿಸಿದ್ದಾರೆ.
ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಚುನಾವಣೆ ಸ್ಪರ್ದಿಸಿದ್ದಾಗ ಗೋಖಲೆ ಉಸ್ತುವಾರಿ ಆಗಿ ಕಾರ್ಯ ನಿರ್ವಹಿಸಿದ್ದನ್ನು ಹೊರಟ್ಟಿ ಸ್ಮರಿಸಿದ್ದು, ರಾಜೇಂದ್ರ ಗೋಖಲೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೂ ಹಾಗೂ ಅವರ ಅಪಾರ ಬಂಧು ಬಳಗಕ್ಕೆ ಭಗವಂತ ನೀಡಲಿ ಎಂದು ಹೊರಟ್ಟಿ ಪ್ರಾರ್ಥಿಸಿದ್ದಾರೆ.