ಕರ್ನಾಟಕ

karnataka

ETV Bharat / state

ಇಂದು ರಾಷ್ಟ್ರಪಿತ ಗಾಂಧಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮದಿನ: ಸಿಎಂ ಸೇರಿದಂತೆ ಗಣ್ಯರಿಂದ ಶುಭ ನಮನ - ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್

ದೇಶದೆಲ್ಲೆಡೆ ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜನ್ಮದಿನವನ್ನು ಮತ್ತು ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಸಿಎಂ ಸೇರಿದಂತೆ ರಾಜಕೀಯ ಗಣ್ಯರು ನಾಡಿನ ಜನತೆ ಶುಭಾಶಯ ತಿಳಿಸಿದ್ದಾರೆ.

ಸಿಎಂ ಸೇರಿದಂತೆ ಗಣ್ಯರಿಂದ ಶುಭ ನಮನ
ಸಿಎಂ ಸೇರಿದಂತೆ ಗಣ್ಯರಿಂದ ಶುಭ ನಮನ

By

Published : Oct 2, 2021, 10:36 AM IST

ಬೆಂಗಳೂರು: ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಕ್ಕೆ ನಾಡಿನ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿದ್ದಾರೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿ ಅವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ.

ಹಾಗೆಯೇ ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಶುಭಾಶಯಗಳು. ಅವರ ಪ್ರಾಮಾಣಿಕತೆ, ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ದೇಶಸೇವೆ, ಪ್ರಧಾನಮಂತ್ರಿಗಳಾಗಿ ಅವರ ಆಡಳಿತ, ದಿಟ್ಟ ನಿರ್ಣಯಗಳು, ಅವರ ಸಾಧನೆಗಳು ಎಂದೆಂದಿಗೂ ಅಮರ ಎಂದು ಸಿಎಂ ಟ್ವೀಟ್​ ಮಾಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ, ನನ್ನ ಪ್ರೀತಿಯ ನಾಡ ಬಂಧುಗಳಿಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಶುಭಾಶಯಗಳು . ಸರ್ವಾಧಿಕಾರ, ಜಾತಿ - ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ ಗಾಂಧಿ ತತ್ವಗಳೇ ನಮ್ಮ ಶಸ್ತ್ರಾಸ್ತ್ರಗಳಾಗಲಿ ಎಂದಿದ್ದಾರೆ.

ನಾಡಿನ ಜನತೆಗೆ 152ನೇ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಸುದಿನದಂದು ಸತ್ಯ , ಶಾಂತಿ, ಅಹಿಂಸೆ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಮಾಡುವ ಮೂಲಕ ಆ ಮಹಾತ್ಮನನ್ನು ಸ್ಮರಿಸೋಣ ಎಂದು ಹೆಚ್.ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜೈ ಜವಾನ್, ಜೈ ಕಿಸಾನ್ ಧ್ಯೇಯ ಮಂತ್ರ ಸಾರಿದ್ದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪ್ರಣಾಮಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ಇನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಭಾರತದ ಎರಡನೇ ಪ್ರಧಾನಮಂತ್ರಿ, ʼಜೈ ಜವಾನ್‌-ಜೈ ಕಿಸಾನ್‌ʼ ಎಂದು ಘೋಷಣೆ ಮೊಳಗಿಸಿ ಜನರಲ್ಲಿ ದೇಶಪ್ರಜ್ಞೆಯನ್ನು ಎಚ್ಚರಗೊಳಿಸಿದ ಮಹಾನ್‌ ನೇತಾರರು, ಸರಳತೆಯ ಸಾಕಾರಮೂರ್ತಿಯೂ ಆದ ಭಾರತರತ್ನ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರಿಗೆ ಜನ್ಮದಿನದ ನಿಮಿತ್ತ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯಂದು ಸಾಬರಮತಿಯ ಆ ಮಹಾನ್ ಸಂತನಿಗೆ ಅನಂತ ಪ್ರಣಾಮಗಳು. ಅವರು ಪ್ರತಿಪಾದಿಸಿದ ಶಾಂತಿ, ಸ್ವದೇಶಿ ಪರಿಕಲ್ಪನೆಗಳ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ ಎಂದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ABOUT THE AUTHOR

...view details