ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಸಿದ್ದತೆ ಆರಂಭಿಸಿರುವ ಬಿಜೆಪಿ ನಾಯಕರು ಜನ ಸ್ಪಂಧನ ಯಾತ್ರೆ ನಡುವೆಯೇ ಆರ್ಎಸ್ಎಸ್ ಕಚೇರಿಗೆ ದಿಢೀರ್ ಭೇಟಿ ನೀಡಿ ಸಂಘ ಪರಿವಾರದ ಪ್ರಮುಖರ ಜೊತೆ ಮಹತ್ವದ ಸಭೆ ನಡೆಸಿದರು.
ನಗರದ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವ ಶಿಲ್ಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ, ಡಾ. ಕೆ.ಸುಧಾಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭೇಟಿ ನೀಡಿ ಸಂಘ ಪರಿವಾರದ ಹಿರಿಯ ನಾಯಕರ ಜೊತೆ ಸಭೆ ನಡೆಸಿದರು.
ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು ಎನ್ನಲಾಗಿದೆ. ಮಹಾರಾಷ್ಟ್ರ ಗಡಿ ವಿವಾದ, ಮಂಗಳೂರು ಬಾಂಬ್ ಸ್ಪೋಟದ ವಿಷಯಗಳು ಅನೌಪಚಾರಿಕವಾಗಿ ಚರ್ಚೆಗೆ ಬಂದಿದ್ದವು ಎನ್ನಲಾಗಿದೆ. ಹೈಕಮಾಂಡ್ ನಿಂದ ಇತ್ತೀಚೆಗೆ ರಾಜ್ಯದ ನಾಯಕರಿಗೆ ಚುನಾವಣಾ ಸಿದ್ದತೆ ಕುರಿತು ಸಂದೇಶ ಬಂದಿದ್ದ ಬೆನ್ನಲ್ಲೇ ಈ ಸಭೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.