ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಚುನಾವಣಾ ಅಖಾಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಮತದಾರನ ತೀರ್ಪು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ವಿ.ಸೋಮಣ್ಣ, ಆರ್ ಅಶೋಕ್ ಸೇರಿದಂತೆ ಸಂಪುಟದ 24 ಸಚಿವರ ರಾಜಕೀಯ ಹಣೆಬರಹ ಇಂದು ಗೊತ್ತಾಗಲಿದೆ.
ಸಿಎಂ ಬೊಮ್ಮಾಯಿ (ಶಿಗ್ಗಾಂವಿ):ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬೊಮ್ಮಾಯಿ ಅವರು 12 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಮೊದಲಿಗೆ ಮೊಹಮ್ಮದ್ ಯೂಸುಫ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ನಂತರದಲ್ಲಿ ಏಕಾಏಕಿ ಅಭ್ಯರ್ಥಿಯನ್ನು ಬದಲಿಸಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿತ್ತು. ಬೊಮ್ಮಾಯಿ ಅವರು ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳ ಹೊಣೆ ಹೊತ್ತಿದ್ದರು.
ಗೋವಿಂದ ಕಾರಜೋಳ (ಮಧೋಳ):ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ಕಣದಲ್ಲಿರುವ ಹಿರಿಯ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಅಭ್ಯರ್ಥಿ ಆರ್ಬಿ ತಿಮ್ಮಾಪೂರ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ. ಸತೀಶ್ ಬಂಡಿವಡ್ಡರ್ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಕೈ ತಪ್ಪಿದ ಕಾರಣ ಬಂಡಿವಡ್ಡರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇವರು ಬೊಮ್ಮಾಯಿ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆಯನ್ನು ನಿರ್ವಹಣೆ ಮಾಡಿದ್ದರು.
ಆರ್. ಅಶೋಕ (ಪದ್ಮನಾಭನಗರ - ಕನಕಪುರ):ಸಚಿವ ಆರ್.ಅಶೋಕ್ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಪದ್ಮನಾಭನಗರದಲ್ಲಿ ಮುನ್ನಡೆ ಸಾಧಿಸಿದ್ದರೆ, ಕನಕಪುರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ತಮ್ಮ ಹಿಂದಿನ ಪದ್ಮನಾಭನಗರ ಕ್ಷೇತ್ರದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ಉದ್ದೇಶದಿಂದ ಕನಕಪುರದಲ್ಲೂ ಅಶೋಕ ಸ್ಪರ್ಧೆ ಮಾಡಿದ್ದು, ಸದ್ಯಕ್ಕೆ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ನ ಡಿಕೆ ಶಿವಕುಮಾರ್ ಮುನ್ನಡೆಯಲ್ಲಿದ್ದಾರೆ. ಕಂದಾಯ ಸಚಿವರಾಗಿದ್ದ ಆರ್ ಅಶೋಕ್, ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದರು.
ಬಿ.ಶ್ರೀರಾಮುಲು (ಬಳ್ಳಾರಿ ಗ್ರಾಮೀಣ):ಸಾರಿಗೆಸಚಿವ ಆರ್.ಅಶೋಕ್ ಅವರು ಕ್ಷೇತ್ರದಲ್ಲಿ ಆಘಾತ ಅನುಭವಿಸಿದ್ದು, ಹಿನ್ನಡೆ ಹೊಂದಿದ್ದಾರೆ. ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಚಿವ ಬಿ.ಶ್ರೀರಾಮುಲು ಈ ಬಾರಿ ಮತ್ತೆ ತಮ್ಮ ಹಳೆಯ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಚುನಾವಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್ನಿಂದ ಬಿ.ನಾಗೇಂದ್ರ ಕಣದಲ್ಲಿದ್ದು, ನೇರ ಪೈಪೋಟಿ ಏರ್ಪಟ್ಟಿದೆ. ಸದ್ಯ ಟ್ರೆಂಡ್ನಲ್ಲಿ ರಾಮುಲು ಮುನ್ನಡೆ ಕಾಯ್ದುಕೊಂಡಿದ್ದಾರೆ. ಶ್ರೀ ರಾಮುಲು ಬಿಎಸ್ವೈ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಆ ಬಳಿಕ ಅವರು ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂತಿಮವಾಗಿ ಅವರು ಸಾರಿಗೆ ಖಾತೆ ಸಚಿವರಾಗಿದ್ದರು.
ವಿ.ಸೋಮಣ್ಣ (ಚಾಮರಾಜನಗರ - ವರುಣ):ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಹಿರಿಯ ನಾಯಕ,ಸಚಿವ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಗೋವಿಂದ ರಾಜನಗರ ಬದಲಿಗೆ ಚಾಮರಾಜನಗರ ಮತ್ತು ವರುಣ ಎರಡೂ ಕಡೆ ಸಹ ಸೋಮಣ್ಣ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಾಮರಾಜ ನಗರದಿಂದ ಸ್ಪರ್ಧಿಸಲಷ್ಟೇ ಒಲವು ಹೊಂದಿದ್ದ ಸೋಮಣ್ಣಗೆ, ಹೈಕಮಾಂಡ್ ವರುಣಾದಲ್ಲೂ ಟಿಕೆಟ್ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಲು ಹಚ್ಚಿತ್ತು. ಚಾಮರಾಜನಗರದಲ್ಲಿ ಕಾಂಗ್ರೆಸ್ನಿಂದ ಹ್ಯಾಟ್ರಿಕ್ ಗೆಲುವು ಕಂಡಿರುವ ಪುಟ್ಟರಂಗ ಶೆಟ್ಟಿ ಅವರೊಂದಿಗೆ ಸೋಮಣ್ಣ ತೀವ್ರ ಜಿದ್ದಾಜಿದ್ದಿಗೆ ಪೈಪೋಟಿಗೆ ಇಳಿದಿದ್ದಾರೆ. ವಸತಿ ಖಾತೆ ಸಚಿವರಾಗಿ ಸೋಮಣ್ಣ ಬೊಮ್ಮಾಯಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಜೆಸಿ ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ):ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಚಿವ ಜೆಸಿ ಮಾಧುಸ್ವಾಮಿ ಅವರು ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಕಾರಣ ಕೆಎಸ್ ಕಿರಣ್ಕುಮಾರ್ ಕಾಂಗ್ರೆಸ್ನಿಂದ ಕಣದಲ್ಲಿದ್ದರೆ, ಜೆಡಿಎಸ್ನಿಂದ ಈ ಹಿಂದೆ ಮೂರು ಬಾರಿ ಗೆದ್ದಿದ್ದ ಮಾಜಿ ಶಾಸಕ ಸಿಬಿ ಸುರೇಶ ಬಾಬು ಸವಾಲು ಎಸೆದಿದ್ದಾರೆ. ಸದ್ಯದ ಟ್ರೆಂಡ್ನಲ್ಲಿ ಏರಿಳಿತ ಕಂಡು ಬರುತ್ತಿದೆ. ಇವರು ಬೊಮ್ಮಾಯಿ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ.
ಆರಗ ಜ್ಞಾನೇಂದ್ರ (ತೀರ್ಥಹಳ್ಳಿ):ಶಿವಮೊಗ್ಗ ಕ್ಷೇತ್ರದಲ್ಲಿ ಸಚಿವ ಆರಗ ಜ್ಞಾನೇಂದ್ರ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್ನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. 1983ರಿಂದ ಇಲ್ಲಿವರೆಗೂ ಆರಗ ಅವರು ಸತತ 10 ಬಾರಿ ಸ್ಪರ್ಧಿಸಿ ದಾಖಲೆ ಬರೆದಿದ್ದಾರೆ. ಇದುವರೆಗೂ ನಾಲ್ಕು ಬಾರಿ ಗೆದ್ದಿರುವ ಅವರು, ಐದು ಅವಧಿಗಳಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಗೆದ್ದರೆ ಅವರಿಗೆ ಐದನೇ ಗೆಲುವು ದೊರೆಯಲಿದೆ. ಎರಡೂವರೆ ದಶಕದಿಂದ ಇಬ್ಬರು ನಡುವೆಯೇ ನೇರ ಪೈಪೋಟಿ ಇದೆ. ಸದ್ಯ ಸಚಿವ ಜ್ಞಾನೇಂದ್ರ ಮುನ್ನಡೆಯಲ್ಲಿದ್ದಾರೆ. ಹಲವು ಟೀಕೆಗಳ ನಡುವೆ ಸಂಪುಟ ಸೇರಿದ ಮೊದಲ ಯತ್ನದಲ್ಲೇ ಗೃಹ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಸಿಎನ್ ಅಶ್ವತ್ಥ ನಾರಾಯಣ (ಮಲ್ಲೇಶ್ವರ):ಬೆಂಗಳೂರಿನಲ್ಲಿ ಮಲ್ಲೇಶ್ವರ ಕ್ಷೇತ್ರದಲ್ಲಿ ಸಚಿವ ಸಿಎನ್ ಅಶ್ವತ್ಥ ನಾರಾಯಣ ನಿರೀಕ್ಷೆಯಂತೆ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ನ ಅನೂಪ್ ಅಯ್ಯಂಗಾರ್ ನಡುವೆ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ನಿಂದ ಉತ್ಕರ್ಷ ಕಣದಲ್ಲಿದ್ದು, ಸದ್ಯ ಅಶ್ವತ್ಥ ನಾರಾಯಣ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಇವರು ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಬಿಎಸ್ವೈ ಸಂಪುಟದಲ್ಲಿ ಡಿಸಿಎಂ ಆಗಿದ್ದರು.
ಸಿಸಿ ಪಾಟೀಲ್ (ನರಗುಂದ):ಗದಗ ಜಿಲ್ಲೆಯ ನರಗುಂದ ಕ್ಷೇತ್ರದಲ್ಲಿ ಸಿಸಿ ಪಾಟೀಲ್ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ನಿಂದ ಬಿಆರ್ ಯಾವಗಲ್ ಕಣದಲ್ಲಿದ್ದಾರೆ. ಇದೇ ಕ್ಷೇತ್ರದಲ್ಲಿ ಈ ಹಿಂದೆ ಐದು ಬಾರಿ ಯಾವಗಲ್ ಗೆದ್ದಿದ್ದರು. ಸಿಸಿ ಪಾಟೀಲ್ ಮೂರು ಮೂರು ಸಲ ಗೆಲುವು ಕಂಡಿದ್ದಾರೆ. ಇಬ್ಬರ ನಡುವೆ ಪೈಪೋಟಿ ಕಂಡು ಬರುತ್ತಿದೆ. ಸಿಸಿ ಪಾಟೀಲ್ ಲೋಕೋಪಯೋಗಿ ಸಚಿವರಾಗಿದ್ದರು.
ಪ್ರಭು ಚವ್ಹಾಣ್ (ಔರಾದ್):ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ಕಣದಲ್ಲಿ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್ನಿಂದ ಭೀಮಸೇನ್ ರಾವ್ ಶಿಂಧೆ ಮತ್ತು ಜೆಡಿಎಸ್ನಿಂದ ಜೈಸಿಂಗ್ ಸ್ಪರ್ಧೆ ಮಾಡಿದ್ದಾರೆ. ಪಶುಸಂಗೋಪನೆ ಸಚಿವರಾಗಿ ಚವ್ಹಾಣ್ ಮಹತ್ವದ ಮಸೂದೆಗಳನ್ನು ಮಂಡಿಸಿ ಗಮನ ಸೆಳೆದಿದ್ದರು.
ಮುರುಗೇಶ ನಿರಾಣಿ (ಬೀಳಗಿ):ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ನ ಜೆಟಿ ಪಾಟೀಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬೀಳಗಿ ಕಳೆದ ಆರು ಚುನಾವಣೆಗಳು ಎಂದರೆ 1994 ರಿಂದಲೂ ನಿರಾಣಿ ಮತ್ತು ಪಾಟೀಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದು, ಇಬ್ಬರು ಕೂಡ ತಲಾ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಯಾರು ವಿಜಯ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಕಾಂಗ್ರೆಸ್ನ ಟಿಕೆಟ್ ವಂಚಿತ ಇತರ ಮುಖಂಡರು ಅತೃಪ್ತಿ ಹೊಂದಿದ್ದು, ಕಾಂಗ್ರೆಸ್ಗೆ ಒಳೇಟಿನ ಭೀತಿಯೂ ಇದೆ. ಭಾರಿ ಕೈಗಾರಿಕಾ ಸಚಿವರಾಗಿದ್ದ ನಿರಾಣಿ, ಬಿಎಸ್ವೈ ರಾಜೀನಾಮೆ ಬಳಿಕ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು.
ಶಿವರಾಮ ಹೆಬ್ಬಾರ್ (ಯಲ್ಲಾಪುರ):ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಮುನ್ನಡೆ ಕಾಣುತ್ತಿದ್ದಾರೆ. 2013, 2018ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಅವರು, ಬಳಿಕ ಬಿಜೆಪಿ ಸೇರಿ ಉಪಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. 2013, 2018ರ ಎರಡೂ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಎಸ್ ಪಾಟೀಲ್ ಸೋತಿದ್ದರು. ಈ ಬಾರಿ ಕಾಂಗ್ರೆಸ್ನಿಂದ ವಿಎಸ್ ಪಾಟೀಲ್, ಹೆಬ್ಬಾರ್ ವಿರುದ್ಧ ಕಣಕ್ಕಿಳಿದಿದ್ದರು. ನೇರಾನೇರ ಸ್ಪರ್ಧೆ ಇದೆ. ಹೆಬ್ಬಾರ್ ಕಾರ್ಮಿಕ ಸಚಿವರಾಗಿ ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ.