ಬೆಂಗಳೂರು: ಸೀಗೇಹಳ್ಳಿ ಗೇಟ್ ನಿವಾಸಿ ಸುನಿತಾ ಎಂಬುವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಿಎಂ ಮುಂದೆ ಅಳಲು ತೋಡಿಕೊಂಡರು. ಜನಸ್ಪಂದನ ಕಾರ್ಯಕ್ರಮದಲ್ಲಿ ಈ ಕುರಿತು ಸಿಎಂಗೆ ದೂರು ನೀಡಿದ ಮಹಿಳೆ, ಆರೋಗ್ಯ ಹದಗೆಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಅ.20 ರಂದು ಹೋಗಿದ್ದೆ. ರಾತ್ರಿಯಿಡಿ ಬೇಧಿ ಆಗಿದ್ದರಿಂದ ನನ್ನ ಬಟ್ಟೆ ಗಲೀಜಾಗಿತ್ತು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿಯಲ್ಲೇ ಆಸ್ಪತ್ರೆಯಿಂದ ತೆರಳುವಂತೆ ಬೆದರಿಸಿದರು. ಆಯಾಸಗೊಂಡಿದ್ದ ನನಗೆ ಗ್ಲೂಕೋಸ್ ಕೂಡ ಹಾಕದೆ ಕೆಟ್ಟದಾಗಿ ವರ್ತಿಸಿದರು ಎಂದು ದೂರಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ಸ್ಥಳದಲ್ಲೇ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಕರೆದು ಸಂಬಂಧಪಟ್ಟವರಿಂದ ವಿವರಣೆ ಕೇಳುವಂತೆ ಸೂಚಿಸಿದರು. ಬಳಿಕ ತಮ್ಮ ಎರಡನೇ ದೂರನ್ನು ಮುಂದಿಟ್ಟ ಸುನಿತಾ ಅವರು, ಮನೆಯ ಮಾಲೀಕರು ಲೀಸ್ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುನಿತಾ ಅವರ ಮನೆ ಮಾಲೀಕರ ವಿವರ ಪಡೆದುಕೊಂಡು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುತ್ರನ ಹೆಸರಿನ ಟ್ರಸ್ಟ್ಗೆ ನಿವೇಶನ ಮಂಜೂರು:ಗದಗದಲ್ಲಿ ಪುತ್ರನ ಹೆಸರಿನ ಟ್ರಸ್ಟ್ಗೆ ಸಿಎಂ ಸಿದ್ದರಾಮಯ್ಯ ನಿವೇಶನ ಮಂಜೂರು ಮಾಡಿಸಿದರು. ಈ ಹಿಂದೆ ಗದಗ ನಗರದಲ್ಲಿ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ಗೆ 22 ಗುಂಟೆ ಜಮೀನು ಕೋರಲಾಗಿತ್ತು. ಬಳಿಕ ಅದನ್ನು ಕಿತ್ತೂರು ಚೆನ್ನಮ್ಮ ಸಮುದಾಯ ಭವನಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ನ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಅನ್ನೋರು ಇಂದು ಸಿಎಂ ಬಳಿ ಅಹವಾಲು ಸಲ್ಲಿಸಿದರು. ಕೂಡಲೇ ಸಿಎಂ ಗದಗ ಡಿಸಿಗೆ ಕರೆ ಮಾಡಿ ಆ 22 ಗುಂಟೆ ನಿವೇಶನವನ್ನು ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ಗೇ ಕೊಡಬೇಕು ಎಂದು ಸೂಚಿಸಿದರು.
ಲೀಸ್ ಹಣ ಹೋಗುತ್ತೆ:ಮೈಸೂರು ರಸ್ತೆಯ ಬ್ಯಾಟರಾಯನಪುರದ 3ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ನವರು ಮನೆ ಜಪ್ತಿಗೆ ಬಂದಿದ್ದಾರೆ ಎಂದು ಸಿಎಂ ಬಳಿ ದೂರಿದರು. ನಾವು ಈ ಮನೆಗೆ ಲೀಸ್ಗೆ ಬಂದಿದ್ದೇವೆ. ಆದರೆ ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ. ನಮ್ಮ ಲೀಸ್ ಹಣವೂ ಹೋಗುತ್ತದೆ ಎಂದು ಗೋಳು ತೋಡಿಕೊಂಡರು. ತಾವು ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ, ನೆರವು ನೀಡಿ ಎಂದು ಮನವಿ ಮಾಡಿದರು.