ಬೆಂಗಳೂರು : ಈಗೇನಿದ್ದರೂ ಡಿಜಿಟಲ್ ಯುಗ. ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರತಿನಿಧಿಗಳು ಜನಸಂಪರ್ಕ ಹೊಂದಿರುತ್ತಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ಸಕ್ರಿಯವಾಗಿ ಸಂಪರ್ಕದಲ್ಲಿರುತ್ತಾರೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯನವರು ಡಿಜಿಟಿಲ್ ಪ್ಲಾಟ್ ಫಾರ್ಮ್ ಮೂಲಕ ರಾಜ್ಯದ ಜನರ ಜೊತೆ ಸಂಪರ್ಕದಲ್ಲಿರಲು ಮುಂದಾಗಿದ್ದರು. ಅವರ ಹಿಂದಿನ ಅವಧಿಯಲ್ಲಿ ತಮ್ಮದೇ ಸಿಎಂ ಸಿದ್ದರಾಮಯ್ಯ ಆ್ಯಪ್ ಅನ್ನು ಆರಂಭಿಸಿದ್ದರು. ಆದರೆ ಚಾಲನೆ ನೀಡಿದ ಆರು ತಿಂಗಳಲ್ಲೇ ಆ ಆ್ಯಪ್ ಕಣ್ಮರೆಯಾಯಿತು. ತಮ್ಮ ಪ್ರಸಕ್ತ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳ ಹೊಸತನಗಳನ್ನು ಅಳವಡಿಸಿಕೊಂಡು ಜನಸಂಪರ್ಕದಲ್ಲಿರಲು ಯತ್ನಿಸುತ್ತಿದ್ದಾರೆ. ಈ ಬಾರಿ ಆ್ಯಪ್ ಬದಲಿಗೆ ವಾಟ್ಸಪ್ ಚಾನೆಲ್ ಮೊರೆ ಹೋಗಿದ್ದಾರೆ.
ಇದೀಗ ರಾಜಕಾರಣಿಗಳು ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ರಾಜ್ಯದ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಿಎಂ ಆದಿಯಾಗಿ ಸಚಿವರುಗಳು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಜನ ಸಂಪರ್ಕಕ್ಕೆ ನೆಚ್ಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳನ್ನು. ಈ ಮುಂಚೆ 2013-2018 ರವರೆಗೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ ಆ್ಯಪ್ ಅನ್ನು ಆರಂಭಿಸಿದ್ದರು. ಅಕ್ಟೋಬರ್ 2017ರಲ್ಲಿ ಸಿಎಂ ಸಿದ್ದರಾಮಯ್ಯ ಆ್ಯಪ್ಗೆ ಚಾಲನೆ ನೀಡಿದ್ದರು. ಆ ಮೂಲಕ ಜನರ ಜೊತೆ ನೇರ ಸಂಪರ್ಕಕ್ಕೆ ನಿರ್ಧರಿಸಿದ್ದರು. ಈ ಆ್ಯಪ್ ಮೂಲಕ ಜನರ ಅಹವಾಲು, ದೂರು, ಸಲಹೆ ನೀಡಬಹುದಾಗಿತ್ತು. ಜೊತೆಗೆ ಸರ್ಕಾರದ ಸಾಧನೆ, ನೀತಿಗಳು, ಕಾರ್ಯಕ್ರಮ, ಅನುಷ್ಠಾನ ಸೇರಿದಂತೆ ಮುಖ್ಯಮಂತ್ರಿಗಳ ಭಾಷಣ, ಸಂದರ್ಶನ, ಪ್ರವಾಸ ಕಾರ್ಯಕ್ರಮಗಳ ಮಾಹಿತಿ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿಯೇ ಲಭ್ಯವಾಗುತ್ತಿತ್ತು.
ಏನಿದು ಸಿಎಂ ಸಿದ್ದರಾಮಯ್ಯ ಆ್ಯಪ್? : ಹಿಂದಿನ ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ ಆ್ಯಪ್ ಆರಂಭಿಸಿದ್ದರು. ಅಕ್ಟೋಬರ್ 2017ರಲ್ಲಿ ಆ್ಯಪ್ಗೆ ಚಾಲನೆ ನೀಡಿದ್ದರು. ಪಿಎಂ ಮೋದಿ ಆ್ಯಪ್ ರೀತಿಯಲ್ಲೇ ಸಿಎಂ ಸಿದ್ದರಾಮಯ್ಯ ಆ್ಯಪ್ಗೆ ಚಾಲನೆ ನೀಡಲಾಗಿತ್ತು. ಅಂದಿನ ತಮ್ಮ ಸರ್ಕಾರದ ಸಾಧನೆ, ಜನಪ್ರಿಯ ಕಾರ್ಯಕ್ರಮಗಳು, ನೀತಿ, ಯೋಜನೆಗಳು, ಅನುಷ್ಠಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಇನ್ನು ತಮ್ಮ ಭಾಷಣ, ಸಂದರ್ಶನ, ಸಂದೇಶ, ಅಭಿಪ್ರಾಯಗಳನ್ನು ಜನರ ಜೊತೆ ನೇರವಾಗಿ ಹಂಚುತ್ತಿದ್ದರು. ಈ ಆ್ಯಪ್ ಅನ್ನು ಸರ್ಕಾರದ ಇ-ಆಡಳಿತ ಇಲಾಖೆ ನಿರ್ವಹಿಸುತ್ತಿತ್ತು.
ಸಿಎಂ ಸಿದ್ಧರಾಮಯ್ಯ ಆ್ಯಪ್ ಲಾಂಚ್ ಆದ ನಾಲ್ಕೈದು ತಿಂಗಳಲ್ಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿದ್ದರು. ಆ್ಯಪ್ ಮೂಲಕ ಸುಮಾರು 4 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿದ್ದವು ಎಂದು ಅಂದು ಇದ್ದ ಅವರ ಮಾಧ್ಯಮ ತಂಡದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಲ್ಪಾವಧಿಯಲ್ಲೇ ಸಿಎಂ ಸಿದ್ದರಾಮಯ್ಯ ಆ್ಯಪ್ ಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಆ್ಯಪ್ ಅನ್ನು ಸಿಎಂ ಸಿದ್ದರಾಮಯ್ಯ ಸಕ್ರಿಯವಾಗಿ ಬಳಸುತ್ತಿದ್ದರು. ಆ ಮೂಲಕ ಜನರ ಜೊತೆ ನೇರ ಸಂಪರ್ಕ ಸಾಧಿಸುತ್ತಿದ್ದರು.
ಆ್ಯಪ್ ಆರಂಭವಾದ ಆರು ತಿಂಗಳಲ್ಲೇ ಸ್ಥಗಿತ: ಆದರೆ ಆ್ಯಪ್ ಆರಂಭಿಸಿದ ಆರು ತಿಂಗಳೊಳಗೆ ಸಿಎಂ ಸಿದ್ದರಾಮಯ್ಯ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿತ್ತು. 2018 ಮಾರ್ಚ್ ತಿಂಗಳಲ್ಲಿ ಆ್ಯಪ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆ ದತ್ತಾಂಶ ಕಳವು ಆರೋಪ ದೊಡ್ಡ ಸದ್ದು ಮಾಡಿತ್ತು. ಆರೋಪ ಕೇಳಿ ಬಂದ ಹಿನ್ನೆಲೆ ಕೇಂದ್ರದಲ್ಲಿ ಕಾಂಗ್ರೆಸ್ ತನ್ನ ಅಧಿಕೃತ ಆ್ಯಪ್ ಅನ್ನು ಡಿಲೀಟ್ ಮಾಡಿತ್ತು. ಮಾರ್ಚ್ 26, 2018ಕ್ಕೆ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆರವು ಮಾಡಿತ್ತು. ಇದಾದ ಮರುದಿನವೇ ಸಿಎಂ ಸಿದ್ದರಾಮಯ್ಯ ಆ್ಯಪ್ ಕೂಡ ಕಣ್ಮರೆಯಾಗಿತ್ತು. ಅಲ್ಲಿಗೆ ಸಿಎಂ ಸಿದ್ದರಾಮಯ್ಯ ಆ್ಯಪ್ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ದತ್ತಾಂಶ ಕಳವು ಆರೋಪ ಕೇಳಿ ಬಂದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಆ್ಯಪ್ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು.