ಬೆಂಗಳೂರು:ಸರ್ಕಾರ ಅಥವಾ ಬಿಬಿಎಂಪಿ ಜಾಗಗಳಲ್ಲಿ ಇದ್ದುಕೊಂಡು, ಸರ್ಕಾರದ ಆದಾಯಕ್ಕೆ ಮೋಸ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಲು ಸಿಎಂ ಮುಂದಾಗಿದ್ದಾರೆ.
ಬಾಡಿಗೆ, ಗುತ್ತಿಗೆ ಅಥವಾ ಲೀಸ್ ರೂಪದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ, ಶಾಲೆ ಕಾಲೇಜು, ಪೆಟ್ರೋಲ್ ಬಂಕ್ಗಳಿಗೆ ನೀಡಿರುವ ಕಟ್ಟಡಗಳ ಅಥವಾ ನಿವೇಶನಗಳ ವರದಿ ನೀಡಬೇಕು. ಹಾಗೆಯೇ ಇವುಗಳಿಂದ ಬರ ಬೇಕಾಗಿರುವ ಬಾಕಿ ಮೊತ್ತ, ಬಡ್ಡಿಯ ಸಂಪೂರ್ಣ ವಿವರವನ್ನು ಹದಿನೈದು ದಿನದೊಳಗೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಅವರಿಗೂ ಪತ್ರ ತಲುಪಿದೆ.
ಹದಿನೈದು ದಿನದೊಳಗೆ ವರದಿ ಕೇಳಿದ ಸಿಎಂ ಬಾಡಿಗೆ, ಅಥವಾ ಲೀಸ್ ಹಣ ನೀಡದೆ ಸರ್ಕಾರಿ ಜಾಗದಲ್ಲಿ ವಿಲಾಸಿಯಾಗಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಸಿಎಂ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನ ಲೀಸ್ ಪಡೆದು ಹಲವು ಕ್ಲಬ್ಗಳು ಕೋಟಿ ಕೋಟಿ ದುಡ್ಡು ಮಾಡ್ತಿವೆ.
ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾನಾ ಸಂಘ-ಸಂಸ್ಥೆಗಳಿಗೆ ಸರ್ಕಾರಿ ಜಮೀನು ಲೀಸ್ ಮತ್ತು ಬಾಡಿಗೆ ನೀಡಲಾಗಿದ್ದರೂ, ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸಿದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿವೆ. ನೂರಾರು ವರ್ಷಗಳಿಂದ ಸರ್ಕಾರಿ ಜಮೀನುಗಳನ್ನ ಉಚಿತವಾಗಿ ಅಥವಾ ಅತಿ ಕಡಿಮೆ ಲೀಸ್, ಬಾಡಿಗೆ ಹಣಕ್ಕೆ ಸಂಘ-ಸಂಸ್ಥೆಗಳು ಅನುಭವಿಸುತ್ತಿವೆ. ಮಾರುಕಟ್ಟೆಯ ಎಷ್ಟೋ ಮಳಿಗೆಗಳು ಕೇವಲ ಒಂದೆರಡು ರೂಪಾಯಿಗೆ ಬಾಡಿಗೆಗೆ ನೀಡಲಾಗಿದೆ.
ಇಷ್ಟಾದರೂ ಬಾಡಿಗೆ ಪಾವತಿಸದವರ ವಿರುದ್ಧ ಸಿಎಂ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಹದಿನೈದು ದಿನದೊಳಗೆ ವರದಿ ನೀಡುವಂತೆ ಸಿಎಂ ಪತ್ರ ಬರೆದಿದ್ದಾರೆ.