ಕರ್ನಾಟಕ

karnataka

ETV Bharat / state

ಕೈ ಕೊಡಲಿದೆಯಾ ಮುಂಗಾರು,  ನೈಸರ್ಗಿಕ ವಿಪತ್ತು ಕೇಂದ್ರ ಸಲ್ಲಿಸಿದ ವರದಿಯಲ್ಲೇನಿದೆ?

ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯದ ಸಾರಾಂಶ ಎಂಬ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಈ ವರದಿಯಲ್ಲಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕುಸಿತ ಕಾಣುತ್ತಿದೆ ಎಂದು ತಿಳಿಸಲಾಗಿದೆ.

climate change effects
ಹವಾಮಾನ ವೈಪರೀತ್ಯ

By

Published : Jun 27, 2020, 11:28 PM IST

ಬೆಂಗಳೂರು: ಕರ್ನಾಟಕ ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿರುವ ರಾಜ್ಯ.‌ ಆದರೆ, ಹವಾಮಾನ ವೈಪರೀತ್ಯದ ಕಾರಣ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)1960 ರಿಂದ 2017ರ ವರೆಗೆ ರಾಜ್ಯದಲ್ಲಿನ ಮಳೆ ಬೀಳುವ ಸ್ವರೂಪದ ಅಧ್ಯಯನ‌ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯಲ್ಲಿ ವಾತಾವರಣ ಬದಲಾವಣೆ ಯಾವ ರೀತಿ ರಾಜ್ಯದ ಮಳೆ ಪ್ರಮಾಣದ‌‌‌ ಮೇಲೆ ಪ್ರತಿಕೂಲ ಪರಿಣಾಮ‌ ಬೀರಿದೆ ಎಂಬುದನ್ನು ವಿವರಿಸಿದೆ. ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯದ ಸಾರಾಂಶ ಎಂಬ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಈ ವರದಿಯಲ್ಲಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕುಸಿತ ಕಾಣುತ್ತಿದೆ ಎಂದು ತಿಳಿಸಲಾಗಿದೆ.

ಹವಾಮಾನ ವೈಪರೀತ್ಯದ ಎಫೆಕ್ಟ್

ಅಧ್ಯಯನ‌ದಲ್ಲಿ ಹೇಳುವಂತೆ ಮುಂಗಾರು ಮಳೆಯ ನಿರ್ಣಾಯಕ ಅವಧಿಯಾದ ಜುಲೈ ತಿಂಗಳಲ್ಲಿ ಮಳೆಯ ಪ್ರಮಾಣ ತೀವ್ರ ಕುಸಿತ ಕಾಣುತ್ತಿದೆ. ಈ ಅವಧಿಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ವರದಿಯಲ್ಲಿ ರಾಜ್ಯಾದ್ಯಂತ ಮಳೆಯಾಗುವ ಪ್ರಮಾಣ, ತೀವ್ರತೆ ಮತ್ತು ಚದುರುವಿಕೆಯಲ್ಲಿ 1960-1990 ಅವಧಿಯಿಂದ ಮತ್ತು 1991-2017 ಅವಧಿ ವರೆಗೆ ಭಾರಿ ವ್ಯತ್ಯಯವಾಗಿದೆ ಎಂದು ವಿವರಿಸಲಾಗಿದೆ.

ಅದರಂತೆ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಗಣನೀಯ ಕುಸಿತ ಕಾಣುತ್ತಿರುವುದು ಕಂಡು ಬಂದಿದೆ. ಅದೇ ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಿರುವುದು ದಾಖಲಾಗಿದೆ.

ವರದಿಯಲ್ಲಿನ ಮಳೆ ಪ್ರಮಾಣದ ಅಟ್ಲಾಸ್ ನಲ್ಲಿ ವಿವಿಧ ಪ್ಯಾರಮೀಟರ್ ಗಳಲ್ಲಾಗಿರುವ ಮಳೆ ವ್ಯತ್ಯಯದ ವಿವರ ನೀಡಲಾಗಿದೆ. ಅದರಂತೆ 1960-2017 ಅವಧಿಯಲ್ಲಿ 176 ತಾಲೂಕುಗಳಲ್ಲಿನ ಮಳೆ ಪ್ರಮಾಣದಲ್ಲಿನ ಬದಲಾವಣೆಯನ್ನು ವಿವರಿಸಲಾಗಿದೆ. ಈ ಪೈಕಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ಪ್ರಮುಖ 83 ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದು ಸಾಬೀತಾಗಿದೆ. ಅದರಲ್ಲೂ 16 ತಾಲೂಕುಗಳಲ್ಲಿ ಮಳೆಯ ಪ್ರಮಾಣ ಭಾರಿ ಕುಸಿತ ಕಾಣುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿರುವ 52 ತಾಲೂಕುಗಳಲ್ಲಿ ಮಳೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

ಈ ಮಳೆ ಪ್ರಮಾಣದಲ್ಲಿನ ವ್ಯತ್ಯಾಸ ಮುಂಗಾರು ಮತ್ತು ಹಿಂಗಾರು ಎರಡೂ ಋತುಗಳಲ್ಲಿ ಪತ್ತೆಯಾಗಿದೆ. ಸಾಮಾನ್ಯವಾಗಿ ಉತ್ತಮ ಮಳೆಯಾಗುವ ಪ್ರದೇಶಗಳಲ್ಲಿ ಮಳೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದರೆ, ಒಣ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದೂ ಅಧ್ಯಯನದ ವೇಳೆ ಗೊತ್ತಾಗಿದೆ.

ಬರಪೀಡಿತ ಪ್ರದೇಶಗಳ ಹೆಚ್ಚಳ ಸಾಧ್ಯತೆ:

ಕರ್ನಾಟಕದಲ್ಲಿನ ನಿರಂತರ ಮತ್ತು ಬಹುವ್ಯಾಪಿ ಬರದಿಂದಾಗಿ ಮಳೆ ಪ್ರಮಾಣದ ಚದುರುವಿಕೆಯಲ್ಲಿ ಅತಿ ಹೆಚ್ಚು ಪ್ರಾದೇಶಿಕ, ಐಹಿಕ ಮಾರ್ಪಾಡು ಕಂಡು ಬರುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಳೆ ಪ್ರಮಾಣದಲ್ಲಿನ ವೈಪರೀತ್ಯದಿಂದ ಸಂಭವಿಸುವ ಬರ ಹಾಗೂ ಪ್ರವಾಹ ಅಂತರ್ಜಲ ವೃದ್ಧಿಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಇದು ಜಲ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಹೀಗಾಗಿ ಇದೇ ಬದಲಾವಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಕಂಡುಬರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಳನಾಡು ಕರ್ನಾಟಕ ಪ್ರದೇಶಗಳಲ್ಲಿ ಸುಮಾರು 40-50% ವರೆಗೆ ಮುಂಗಾರು ಮಳೆ ಪ್ರಮಾಣದಲ್ಲಿ ವಾರ್ಷಿಕ ಬದಲಾವಣೆ ದಾಖಲಾಗಿದ್ದು, ಆ ಭಾಗಗಳನ್ನು ಬರಪೀಡಿತವನ್ನಾಗಿಸುವ ಆತಂಕ ಎದುರಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details