ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕೌಟುಂಬಿಕ ಪ್ರಕರಣಗಳಲ್ಲಿ ಅರ್ಜಿದಾರರು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ದೂರುದಾರರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸದಂತೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (ಎಸ್ಓಪಿ) ಮಾರ್ಗಸೂಚಿಗಳ ಅನ್ವಯ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ನಿಯಮಿತ ಕಲಾಪವನ್ನು ಜೂನ್ 1ರಿಂದ ಆರಂಭಿಸಿವೆ. ಈ ವೇಳೆ ಎದುರಾಗುವ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳಿಗೆ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಕೌಟುಂಬಿಕ ಪ್ರಕರಣಗಳಲ್ಲಿ ಅರ್ಜಿ ದಾಖಲಿಸುವಾಗ ಮತ್ತು ವಿಚಾರಣೆ ಸಂದರ್ಭದಲ್ಲಿ ಉಭಯ ಪಕ್ಷಗಳ ಅಧಿಕೃತ ವಕೀಲರು ಹಾಜರಿದ್ದಾಗ ಕಕ್ಷೀದಾರರ ಖುದ್ದು ಹಾಜರಿ ಅಗತ್ಯವಿಲ್ಲ. ಹಾಗೆಯೇ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ದಂಪತಿ ಸಹ ಕೋರ್ಟ್ಗೆ ಹಾಜರಾಗುವ ಅಗತ್ಯವಿಲ್ಲ ಎಂದು ಸೂಚಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸಿಆರ್‌ಪಿಸಿ 190(1)(ಎ) ಅಡಿ ದೂರು ದಾಖಲಿಸುವಾಗ ವಕೀಲರು ಇದ್ದಲ್ಲಿ, ಅರ್ಜಿದಾರರು ಹಾಜರಿರುವ ಅಗತ್ಯವಿಲ್ಲ ಎಂದಿರುವ ಹೈಕೋರ್ಟ್, ಆರೋಪಿಗಳನ್ನು ಮೊದಲ ಬಾರಿಗೆ ಮ್ಯಾಜಿಸ್ಟ್ರೇಟ್ ಎದುರು ಕಡ್ಡಾಯವಾಗಿ ಹಾಜರುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಸುರಿಸುವ ಕಾರ್ಯವಿಧಾನಗಳ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ತಿಳಿಸುವಂತೆ ಹೆಚ್ಚುವರಿ ಅಡ್ಟೊಕೇಟ್ ಜನರಲ್ ಅವರಿಗೆ ಸೂಚಿಸಿದೆ.
ಕಕ್ಷೀದಾರರ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ, ಕೌಟುಂಬಿಕ ಪ್ರಕರಣಗಳಲ್ಲಿ ಅರ್ಜಿ ದಾಖಲಿಸುವಾಗ ಅರ್ಜಿದಾರರ ಖುದ್ದು ಹಾಜರಾತಿಗೆ ಸೂಚಿಸುವ ಕೌಟುಂಬಿಕ ನ್ಯಾಯಾಲಯಗಳ ರೂಢಿಗೆ ಯಾವುದೇ ಕಾನೂನಿನ ಆಧಾರವಿಲ್ಲ. ಸಿಆರ್‌ಪಿಸಿ ಸೆಕ್ಷನ್ 190(1) (ಎ) ದೂರು ದಾಖಲಿಸುವ ಸಂದರ್ಭದಲ್ಲಿ ವಕೀಲರು ಹಾಜರಿದ್ದರೆ ದೂರುದಾರರ ಖುದ್ದು ಹಾಜರಿಗೆ ಮ್ಯಾಜಿಸ್ಟ್ರೇಟ್ ಸೂಚಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.