ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನ ಡಿಸಿಎಂ ಹಾಗೂ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಹೇಳಿದ್ದೇನು?!

ಬೆಳಗಾವಿ ಜಿಲ್ಲೆಯಿಂದ ಮೂವರು ಸಚಿವರನ್ನು ಮಾಡಬೇಕು ಎಂದು ಕೇಳಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

By

Published : May 18, 2023, 8:40 PM IST

Updated : May 18, 2023, 9:31 PM IST

ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನ ಡಿಸಿಎಂ ಹಾಗೂ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಹೇಳಿದ್ದೇನು?!

ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮುಗಿದಿದ್ದು, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಸ್ತಾವವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಅವರೇ ಮಂಡಿಸಿದರು. ಇದಕ್ಕೆ ಶಾಸಕರು ಸರ್ವಾನುಮತದ ಅನುಮೋದನೆ ನೀಡಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾಗಾಂಧಿ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಜರಿದ್ದರು. ಉಭಯ ನಾಯಕರ ನೇತೃತ್ವದಲ್ಲಿ ಶಾಸಕಾಂಗ ಸಭೆ ಆರಂಭವಾಗಿದ್ದು, ಹಿರಿ ಕಿರಿಯ ಶಾಸಕರೆಲ್ಲ ಭಾಗಿಯಾಗಿದ್ದರು.

ಶಾಸಕಾಂಗ ಸಭೆಗೆ ತೆರಳುವ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಡಿಸಿಎಂ ಹುದ್ದೆಗೆ ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಹೈಕಮಾಂಡ್ ನಿರ್ಧಾರವೆ ಅಂತಿಮ. ಒಂದೇ ಡಿಸಿಎಂ ಕೊಟ್ಟರೆ ನಾವು ಏನು ಕೊಳೋಲ್ಲ. ಹೆಚ್ಚಿಗೆ ಮಾಡಿದರೆ ನಾನು ಕೂಡ ಡಿಸಿಎಂ ಕೊಡಿ ಎಂದು ಕೇಳುತ್ತೇನೆ. ಬೆಳಗಾವಿ ಜಿಲ್ಲೆಯಿಂದ ಮೂವರು ಸಚಿವರನ್ನು ಮಾಡಬೇಕು ಎಂದು ಕೇಳಿದ್ದೇವೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸುಮಾರು ಜನ ಹಿರಿಯ ಮುಖಂಡರು ಡಿಸಿಎಂ ರೇಸ್​ನಲ್ಲಿ ಇದ್ದಾರೆ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಗೆದ್ದಿರುವ ಸಂಖ್ಯೆಯ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡಬೇಕು ಎಂದು ಹೇಳಿದ್ದಾರೆ.

ಮಾಜಿ ಸಚಿವ ತನ್ವೀರ್ ಸೇಟ್ ಮಾತನಾಡಿ, ಎಲ್ಲಾ ಸಮುದಾಯದವರು ಡಿಸಿಎಂ ಸ್ಥಾನ ಕೇಳಿದ್ದಾರೆ. ಹೈಕಮಾಂಡ್ ಒಂದೇ ಡಿಸಿಎಂ ಅಂತ ಹೇಳಿದೆ. ನಾವು ಅದಕ್ಕೆ ಬದ್ಧ. ಆಸೆಗೆ ಕೊನೆ ಇಲ್ಲ, ಹೈಕಮಾಂಡ್ ತೀರ್ಮಾನವೆ ಅಂತಿಮ ಎಂದಿದ್ದಾರೆ. ಹೆಚ್ಚಿನ ಡಿಸಿಎಂ ಸ್ಥಾನ ವಿಚಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಅದೆಲ್ಲಾ ಉಹಾಪೋಹ. ನಾನು ಡಿಸಿಎಂ ಆಕಾಂಕ್ಷಿಯಲ್ಲ ಎಂದಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಬೆಂಗಳೂರು ಬಿಟ್ಟರೆ ಬೆಳಗಾವಿ ಅತಿ ದೊಡ್ಡ ಜಿಲ್ಲೆ. 18 ರ ಪೈಕಿ 11 ಸ್ಥಾನದಲ್ಲಿ ಗೆದ್ದಿದ್ದೇವೆ. ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನವನ್ನ ಗೆದ್ದಿದ್ದೇವೆ. ಕನಿಷ್ಠ 3 ಸಚಿವ ಸ್ಥಾನ ಜಿಲ್ಲೆಗೆ ನೀಡಬೇಕು. ಲಿಂಗಾಯತರಿಗೆ ಡಿಸಿಎಂ ಸ್ಥಾನ ಬೇಡಿಕೆ ವಿಚಾರಕ್ಕೆ ಮಾತನಾಡಿ, ನಾವು ಜಾತಿ, ಸಮುದಾಯದ ಮೇಲೆ ಸ್ಥಾನ ಹಂಚಿಕೆ ಮಾಡಲ್ಲ. ಬಸವಣ್ಣನ ತತ್ವ ಸಿದ್ದಾಂತದ ಮೇಲೆ ನಾವು ಅಧಿಕಾರ ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ.

ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಭೋವಿ ಸಮಾಜದಲ್ಲಿ ಮೂವರ ಆಯ್ಕೆ ಆಗಿದ್ದೀವಿ. ಒಬ್ಬರಿಗೆ ಸಚಿವ ಸ್ಥಾನ ನಿರೀಕ್ಷೆ ಇದೆ. ಸ್ವಾಮೀಜಿಗಳು ಸಹ‌ ಒತ್ತಾಯ ಮಾಡ್ತಾ ಇದ್ದಾರೆ. ಸಚಿವ ಸ್ಥಾನ ಕೇಳಿದ್ದೇನೆ. ಸಿಗುವ ನಿರೀಕ್ಷೆ ಮಾತ್ರವಲ್ಲ ಭರವಸೆಯೂ ಇದೆ ಎಂದಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಕೆ ಹೆಚ್ ಮುನಿಯಪ್ಪ ಮಾತನಾಡಿ, ರಾಜಕೀಯದಲ್ಲಿ ನಮ್ಮದು ದೊಡ್ಡ ಪಕ್ಷ. ಸಾಕಷ್ಟು ಏರುಪೇರು ಇರುತ್ತೆ. ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತೆ. ದಲಿತ ಸಮುದಾಯಕ್ಕೆ ಡಿಸಿಎಂ ವಿಚಾರ ಮಾತನಾಡಿ, ಹೈಕಮಾಂಡ್ ಅದನ್ನ ನೋಡಿಕೊಳ್ಳುತ್ತೆ. ಮೊದಲು ನಾವು ಕೊಟ್ಟ ಭರವಸೆಗಳನ್ನ ಈಡೇರಿಸುವ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಪದಗ್ರಹಣ ಸಮಾರಂಭ ವಿವರ: ಶನಿವಾರ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನೆರವೇರಲಿದೆ. ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ. ಡಿಸಿಎಂ ಆಗಿ ಡಿಕೆಶಿ ಪ್ರಮಾಣ ವಚನ ಸ್ವೀಕಾರ ಮಾಡುವರು. ಪ್ರಮಾಣ ವಚನ ಕಾರ್ಯಕ್ರಮಕ್ಕೆ‌ ಹಲವು ಪ್ರಮುಖ ಗಣ್ಯರ ಆಗಮನವನ್ನ ನಿರೀಕ್ಷಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಿಎಂಗಳು ಭಾಗಿಯಾಗುವ ಮಾಹಿತಿ ಇದೆ.

ಗಣ್ಯರ ಆಗಮನದ ಬಗ್ಗೆ ಅಧಿಕೃತ ಸುತ್ತೋಲೆ ಹೊರಬಿದ್ದಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಸಿಎಂ ಸ್ಟಾಲಿನ್, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಬಿಹಾರ ಸಿಎಂ ನಿತೀಶ್ ಕುಮಾರ್, ಚತ್ತೀಸ್ ಘಡ ಸಿಎಂ ಭೂಪೇಶ್ ಬಗೇಲ್, ಹಿಮಾಚಲ‌ಪ್ರದೇಶ ಸಿಎಂ ಸುಖ್ವೀಂದರ್ ಸಿಂಗ್, ಪುದುಚೇರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಪಕ್ಷದ ಶಾಸಕಾಂಗ ಪಕ್ಷದ ಸಭೆ ಆರಂಭ.. ಕಾಂಗ್ರೆಸ್​ ಕಾರ್ಯಕರ್ತರಲ್ಲಿ ಸಂಭ್ರಮವೋ ಸಂಭ್ರಮ!

Last Updated : May 18, 2023, 9:31 PM IST

ABOUT THE AUTHOR

...view details