ಬೆಂಗಳೂರು: ಗೋವಿಂದರಾಜನಗರದ ಅಗ್ರಹಾರ ದಾಸರಹಳ್ಳಿ ಕೊಳಚೆ ಪ್ರದೇಶದ ಮನೆಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ ನಿವಾಸಿಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಯಿಂದ ತೆರವುಗೊಳಿಸಿದೆ.
ಅಗ್ರಹಾರ ದಾಸರಹಳ್ಳಿ ಕೊಳಚೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ 65 ಮನೆಗಳ ಪೈಕಿ, 17 ಮನೆಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದವರನ್ನು ತೆರವುಗೊಳಿಸುವಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಫೆ. 6ರಂದು ನೋಟಿಸ್ ನೀಡಿತ್ತು.
ತೆರವು ವೇಳೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದರು. ನ್ಯಾಯಾಲಯದಲ್ಲಿ ಸ್ಟೇ ಆರ್ಡರ್ ಇದ್ರೂ ಗರ್ಭಿಣಿಯರು, ಮಕ್ಕಳು ಸೇರಿದಂತೆ ಎಲ್ಲರನ್ನೂ ಮನೆಯಿಂದ ತೆರವು ಮಾಡಿಸುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಏಕಾಏಕಿ ಬಂದ ಅಧಿಕಾರಿಗಳು ಪೊಲೀಸರ ನೆರವಿಂದ ಮನೆಯಿಂದ ಹೊರಹಾಕಲು ಯತ್ನಿಸಿದ್ದಾರೆ. ಬಟ್ಟೆ, ಬರೆ, ಮಕ್ಕಳನ್ನು ಎಳೆದು ಹೊರ ದಬ್ಬಿದ್ದಾರೆ. ವಿಷ ಸೇವಿಸಿದವರನ್ನೂ ದರದರನೇ ಎಳೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಇದೇ ವೇಳೆ ಪಾಲಿಕೆ ಕಾರ್ಪೋರೇಟರ್ಗಳು ದುಡ್ಡು ಕೇಳುತ್ತಿರುವ ಆರೋಪ ಕೂಡ ಕೇಳಿ ಬಂತು.
ಓದಿ : ಕೋರ್ಟ್ ನಿರ್ದೇಶನದಂತೆ ಅಗ್ರಹಾರ ದಾಸರಹಳ್ಳಿಯಲ್ಲಿನ ಮನೆಗಳ ತೆರವು: ಸಚಿವ ವಿ.ಸೋಮಣ್ಣ
ಬಿಜೆಪಿ ಕಾರ್ಪೋರೇಟರ್ಗಳು, ಇಲ್ಲಿನ ನಿವಾಸಿಗಳು ಕಾಂಗ್ರೆಸ್ ಬೆಂಬಲಿಗರು ಎನ್ನುವ ಕಾರಣಕ್ಕೆ 17 ಮನೆಗೆ ನೋಟಿಸ್ ಕೊಟ್ಟು ಎತ್ತಂಗಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದರೆ ಈ ಕೊರೊನಾ ಸಮಯದಲ್ಲಿ ಎಲ್ಲಿಗೆ ಹೋಗುವುದು ಎಂದು ಜನ ಕಣ್ಣೀರು ಹಾಕಿದರು.
ಜನವರಿಗೆ ಸ್ಟೇ ಅವಧಿ ಮುಗಿದಿತ್ತು. ಮೂವತ್ತು ಮನೆಗಳ ಪೈಕಿ ಕೇವಲ 17 ಮನೆಗಳಿಗೆ ನಿನ್ನೆ ನೋಟಿಸ್ ಕೊಟ್ಟಿದ್ದು, ಇಂದು ಏಕಾಏಕಿ ಬಂದು ಮನೆಯ ವಸ್ತುಗಳನ್ನು ಹೊರ ಹಾಕಿದ್ದಾರೆ. ಈ ಹಿಂದೆ ಪ್ರಿಯಾಕೃಷ್ಣ ಅವರು ಮನೆ ನೀಡಿದ್ದರು. ನಂತರ ಸಚಿವ ವಿ.ಸೋಮಣ್ಣ ಮನೆ ಪತ್ರ ಕೊಡುವುದಾಗಿಯೂ ಭರವಸೆ ನೀಡಿದ್ದರು. ಈಗ ಏಕಾಏಕಿ ತೆರವು ಮಾಡಿಸುತ್ತಿದ್ದಾರೆ ಎಂದು ಮನೆ ಕಳೆದುಕೊಂಡವರು ಅವಲತ್ತುಕೊಂಡರು.
ಫೆಬ್ರವರಿಯಲ್ಲಿ ಕೋರ್ಟ್ ಮೊರೆ ಹೋಗಲು ಕುಟುಂಬಗಳು ರೆಡಿಯಾಗಿದ್ದವು. ಆದರೆ, ಈ ಮಧ್ಯೆ ಏಕಾಏಕಿ ಮನೆ ತೆರವು ಮಾಡಲಾಗುತ್ತಿದೆ. ನಾವು ಮನೆಯಿಂದ ಕದಲಲ್ಲ. ಕಟ್ಟಡದ ಮೇಲಿಂದ ಹಾರುತ್ತೇವೆ ಎಂದು ನಿವಾಸಿಗಳು ಪೊಲೀಸರಿಗೆ ಗದರಿಸಿದರು. ಸೊಸೆ ತುಂಬು ಗರ್ಭಿಣಿ, ದಯವಿಟ್ಟು ಮನೆ ಖಾಲಿ ಮಾಡಿಸಬೇಡಿ ಒಂದು ಕುಟುಂಬ ಕಣ್ಣೀರು ಹಾಕುತ್ತಿತ್ತು. ಕೇಳದೆ ಇದ್ದಾಗ ಗ್ಯಾಸ್ ಸಿಲಿಂಡರ್ಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಗರ್ಭಿಣಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಕಾರ್ಯಾಚರಣೆ ವೇಳೆ ಪಿಂಚಣಿ ದುಡ್ಡನ್ನೇ ನಂಬಿ ಬದುಕುತ್ತಿದ್ದ 70 ವರ್ಷದ ಅಜ್ಜಿಯ ಮನೆ ಸಾಮಾಗ್ರಿಗಳನ್ನು ಕೂಡ ಹೊರಗೆ ಹಾಕಲಾಯಿತು.