ಬೆಂಗಳೂರು:ಕರ್ನಾಟಕ ರಾಜ್ಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸುವ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ನಗರದ ಪೌರಕಾರ್ಮಿಕರು ಹೆಜ್ಜೆ ಹಾಕಲಿದ್ದಾರೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ 'ಸ್ವಚ್ಛತಾ ಯೋಧರು' ಈ ಬಾರಿಯ ಹೈಲೈಟ್
ಗಣರಾಜ್ಯೋತ್ಸವದ ಪರೇಡ್ನಲ್ಲಿ ಚಿಣ್ಣರು, ಯೋಧರು ಸೇರಿದಂತೆ ಇನ್ನಿತರರು ಹೆಜ್ಜೆ ಹಾಕುವುದು ಸಹಜ. ಆದರೆ, ಈ ವರ್ಷ ಗಣರಾಜ್ಯೋತ್ಸವದಲ್ಲಿ ಬಿಬಿಎಂಪಿಯ ಪೌರಕಾರ್ಮಿಕರು ಸಹ ಪಥಸಂಚಲನ ನಡೆಸಲಿದ್ದಾರೆ
ಸ್ವಚ್ಛತಾ ಯೋಧರೆಂದು ಬಿಬಿಎಂಪಿ, ಪೌರಕಾರ್ಮಿಕರ ಒಂದು ತಂಡವನ್ನು ಗುರುತಿಸಿದ್ದು, ತಮ್ಮ ಕೆಲಸ ಕಾರ್ಯದ ಮಹತ್ವವನ್ನು ಪರೇಡ್ ಮೂಲಕ ಸಾರಲಿದ್ದಾರೆ. ನಿತ್ಯ ಮುಂಜಾನೆ ಆರು ಗಂಟೆಯಿಂದಲೇ ನಗರದ ಬೀದಿ-ಬೀದಿಯನ್ನು ಗುಡಿಸಿ, ಮನೆಗಳ ಕಸ ಸಂಗ್ರಹಿಸಿ ನಗರ ನೈರ್ಮಲ್ಯಕ್ಕೆ ಕಾರಣರಾಗಿರುವ ಹದಿನೆಂಟು ಸಾವಿರ ಪೌರಕಾರ್ಮಿಕರ ಮಹತ್ವವನ್ನು ಈ ತಂಡ ಪ್ರತಿನಿಧಿಸಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಪೌರ ಕಾರ್ಮಿಕರಿಗೆ ನಮ್ಮ ನಗರವನ್ನು ಸ್ವಚ್ಛವಾಗಿಡುವ ಸಂಪೂರ್ಣ ಜವಾಬ್ದಾರಿ ಇದೆ. ನಗರಕ್ಕೆ ಶೋಭೆ ತಂದು ಕೊಡುವವರು ಪೌರಕಾರ್ಮಿಕರು. ಕೆಲಸದ ಗೌರವ ಘನತೆಯನ್ನು ಕಾಪಾಡುವಲ್ಲಿ ಎಡವಿದ್ದೇವೆ ಎಂದು ಭಾಸವಾಗಿದ್ದರಿಂದ ಅವರನ್ನು ಈ ಪಥಸಂಚಲನದಲ್ಲಿ ತೊಡಗಿಸಿಕೊಂಡಿದ್ದೇವೆ. ಅವರ ಕೆಲಸವನ್ನು ಗುರುತಿಸಿ, ಈ ಮೂಲಕ ಗೌರವ ಕೊಡುತ್ತಿದ್ದೇವೆ ಎಂದರು.