ಬೆಂಗಳೂರು : ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 160 ಮತಗಳ ಅಂತರದ ಗೆಲುವು ಸಾಧಿಸಿದ ನಂತರ ಬಿಜೆಪಿ ತಕರಾರು ತೆಗೆದು ಅಂಚೆ ಮತಗಳ ಮರು ಪರಿಶೀಲನೆ ಮೂಲಕ ಬಿಜೆಪಿಗೆ ಮುನ್ನಡೆ ಸಿಗುವಂತಾಯಿತು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.
ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 160 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಅಂಚೆ ಮತಗಳ ಮರುಪರಿಶೀಲನೆಗೆ ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಮನವಿಯಂತೆ ಎರಡು ಬಾರಿ ಅಂಚೆ ಮತಗಳ ಮರು ಪರಿಶೀಲನೆ ನಡೆಸಿದ ನಂತರ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಎನ್ನುವ ಮಾಹಿತಿ ಹೊರಬಿದ್ದಿದೆ. 17 ಮತಗಳಿಂದ ಸಿ ಕೆ ರಾಮಮೂರ್ತಿ ಮುನ್ನಡೆ ಎಂದು ಮಾಹಿತಿ ರವಾನಿಸಲಾಯಿತು.
ಇದನ್ನೂ ಓದಿ:9 ಜಿಲ್ಲೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ, ಭದ್ರಕೋಟೆ ಛಿದ್ರ: ಮಕಾಡೆ ಮಲಗಿದ ಬಿಜೆಪಿ
ಇದರಿಂದಾಗಿ ಎಸ್ಎಸ್ಎಂಆರ್ವಿ ಕಾಲೇಜು ಬಳಿ ಗಲಾಟೆ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿಕೊಂಡು ಗದ್ದಲವೆಬ್ಬಿಸಿದ್ದಾರೆ. ಅಕ್ರಮವಾಗಿ ಸಂಸದ ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದು ಆರ್ಒ ಮತ್ತು ವೀಕ್ಷಕರ ಮೇಲೆ ಒತ್ತಡ ಹಾಕಿ ಮರು ಎಣಿಕೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ವರ್ಕೌಟ್ ಆಗದ ಮೋದಿ ರೋಡ್ ಶೋ : ಕಾಂಗ್ರೆಸ್ಗೂ ಸಿಗಲಿಲ್ಲ ಹೆಚ್ಚು ಸ್ಥಾನ
80+ ವರ್ಷ ಮೇಲ್ಪಟ್ಟವರ ಮತದಾನ, ಅಂಚೆ ಮತದಲ್ಲಿ ಅಧಿಕಾರಿಗಳ ಸಿಗ್ನೇಚರ್ ಹಾಗೂ ಸೀಲ್ ಇರಲಿಲ್ಲ. ಹೀಗಾಗಿ ಆರಂಭಿಕ ಹಂತದಲ್ಲಿ ಇದನ್ನು ರಿಜೆಕ್ಟ್ ಮಾಡಲಾಗಿದೆ. ಆದರೆ ಅಧಿಕಾರಿಗಳ ಸಹಿ ಇರದೇ ಇರೋದು ಅಧಿಕಾರಿಗಳದ್ದೇ ತಪ್ಪು. ಇದನ್ನು ದೃಢೀಕರಣ ಮಾಡದೆ ಇರೋದು ಪಕ್ಷದ ತಪ್ಪಲ್ಲ ಅಂತಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.
ಇದನ್ನೂ ಓದಿ: 'ಜನ ಮತಹಾಕಿ ವಿಶ್ವಾಸ ತೋರಿಸಿದ್ದಾರೆ, ಭರವಸೆಗಳನ್ನು ಬೇಗ ಈಡೇರಿಸುವ ಜವಾಬ್ದಾರಿ ಇದೆ'
ಅದರಂತೆ ಅಧಿಕಾರಿಗಳ ಸಹಿ ಇಲ್ಲದ ಮತಗಳ ಪರಿಗಣನೆ ಮಾಡಲು ತೀರ್ಮಾನಿಸಲಾಯಿತು. ಇದರಿಂದಾಗಿ 160 ಮತಗಳ ಅಂತರದಲ್ಲಿ ಗೆದ್ದಿದ್ದ ಸೌಮ್ಯ ರೆಡ್ಡಿ ನಂತರ ಮತಗಳ ಮರು ಪರಿಶೀಲನೆ ನಂತರ 17 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಮತಗಳ ಮರು ಪರಿಶೀಲನೆಗೆ ರಾಮಲಿಂಗಾರೆಡ್ಡಿ ಹಾಗು ಸೌಮ್ಯ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮತ ಎಣಿಕಾ ಕೇಂದ್ರದಲ್ಲಿ ಗೊಂದಲ ಮುಂದುವರೆದಿದ್ದು, ಸದ್ಯಕ್ಕೆ ಮರುಪರಿಶೀಲನಾ ಫಲಿತಾಂಶವನ್ನು ಆಯೋಗ ಪ್ರಕಟ ಮಾಡಿಲ್ಲ.
ಜಯನಗರ ಮತ ಎಣಿಕಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಅಂಚೆ ಮತಗಳ ಎಣಿಕೆ ಕಾರ್ಯ ಬೆಳಗ್ಗೆಯೇ ಮುಗಿದಿದೆ. ಮತ ಎಣಿಕೆಗೆ ವೇಳೆ 160 ಮತ ತಿರಸ್ಕಾರ ಮಾಡಿದ್ದರು. ನಂತರ ವೀಕ್ಷಕರು ಬಂದು ಅದನ್ನು ಪರಿಗಣಿಸಲು ಸೂಚಿಸಿದ್ದಾರೆ. ವೀಕ್ಷಕರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುನ್ನಡೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ:ಬಿಜೆಪಿಯವರು ಮರು ಎಣಿಕೆಗೆ ಒತ್ತಾಯಿಸಿದ್ದಾರೆ. ವೀಕ್ಷಕರು ವೀಕ್ಷಕರ ಕೆಲಸ ಮಾಡಬೇಕು. ಆದರೆ ಅವರು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಸದ್ಯ 17 ಮತಗಳಿಂದ ಬಿಜೆಪಿ ಮುನ್ನಡೆ ಎನ್ನಲಾಗುತ್ತಿದೆ. ಆದರೆ ಮುನ್ನಡೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಸೌಮ್ಯರೆಡ್ಡಿ ಮತ್ತೆ ಮರು ಎಣಿಕೆಗೆ ಕೇಳಿದ್ದಾರೆ. ನಾವು ನ್ಯಾಯಯುತವಾಗಿ ಚುನಾವಣೆ ಮಾಡಿ, ಕಾನೂನು ರೀತಿ ಮಾಡಿ, ಯಾವುದೇ ಒತ್ತಡಕ್ಕೆ ಮಣಿಯಬೇಡಿ ಎನ್ನುತ್ತಿದ್ದೇವೆ. ಸದ್ಯ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟ್ ಬಿಟ್ಟು ಉಳಿದವರು ಎಲ್ಲ ಹೊರಗಿದ್ದಾರೆ. ನೋಡೋಣ? ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಿ ನಂತರ ನಮಗೆ ವ್ಯತಿರಿಕ್ತವಾಗಿ ಫಲಿತಾಂಶ ನೀಡಿದರೆ, ಕಾನೂನು ಹೋರಾಟ ಇದ್ದೇ ಇದೆ. ಸದ್ಯ ಈ ಕ್ಷೇತ್ರದ ಎಲ್ಲ ಮತ ಮರು ಎಣಿಕೆಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಅಂದು 1 ಮತದ ಅಂತರದಿಂದ ಸೋತಿದ್ದ ARK ಗೆ 59 ಸಾವಿರ ಮತಗಳ ಗೆಲುವು: ಎನ್ ಮಹೇಶ್ಗೆ ಹೀನಾಯ ಸೋಲು