ಬೆಂಗಳೂರು : ರಾಗಿ ಮತ್ತು ತೊಗರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಸ್ವಯಂ ಹೇಳಿಕೆ ಕೊಡಿಸುವ ಭರವಸೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದರು. ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು ರಾಗಿ ಬೆಳೆಗಾರರ ಸಮಸ್ಯೆಯ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಲು ಆರಂಭಿಸಿದರು.
ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ರಾಗಿ, ತೊಗರಿ ಸಮಸ್ಯೆ.. ಆಗ ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ರಾಗಿ, ತೊಗರಿ ಸೇರಿದಂತೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉತ್ತರವನ್ನು ನೀಡಲಾಗಿದೆ. ನಿಮ್ಮ ಸಹಾಯಕ್ಕೆ ಬರುತ್ತೇನೆ. ಮುಖ್ಯಮಂತ್ರಿಗಳು ಬಂದ ಮೇಲೆ ಹೇಳಿಕೆ ಕೊಡಿಸುವ ಭರವಸೆಯನ್ನು ನೀಡಿದರು.
ರಾಗಿ ಭಿತ್ತಿ ಪತ್ರ ಪ್ರದರ್ಶಿಸಿದ ಶಾಸಕ : ಶಾಸಕ ರಂಗನಾಥ್ ಅವರು ರಾಗಿ ಭಿತ್ತಿ ಪತ್ರ ಪ್ರದರ್ಶಿಸುವುದರ ಜೊತೆಗೆ ಕವರ್‌ನಲ್ಲಿ ರಾಗಿಯನ್ನೂ ಸಹ ಸದನಕ್ಕೆ ತಂದು ಪ್ರದರ್ಶಿಸಿದರು. ನಂತರ ರಾಗಿಯನ್ನು ಸಭಾಧ್ಯಕ್ಷರಿಗೆ ತಲುಪಿಸಿದರು. ರಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಬರಬೇಕು. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್‍ನ ಹಲವು ಸದಸ್ಯರು ಶಾಸಕ ರಂಗನಾಥ್ ಅವರಿಗೆಬೆಂಬಲವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯರಾದ ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಇತರ ಶಾಸಕರು, ತೊಗರಿ ಖರೀದಿ ಸಮಸ್ಯೆ ಇದೆ. ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಸ್ಪೀಕರ್ ಭರವಸೆ :ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ರಾಗಿ ಖರೀದಿ ವಿಚಾರದ ಬಗ್ಗೆ ಪ್ರಸ್ತಾಪವಾಗಿ ಸಿಎಂ ಉತ್ತರ ಕೊಟ್ಟಿದ್ದಾರೆ. ರಾಗಿ ಖರೀದಿ ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟರೆ ತಮ್ಮದೇನೂ ತಕರಾರರು ಇಲ್ಲ ಎಂದರು. ಸ್ಪೀಕರ್ ಭರವಸೆಯಿಂದ ಸಮಾಧಾನಗೊಂಡ ಶಾಸಕ ರಂಗನಾಥ್ ಧರಣಿ ಕೈಬಿಟ್ಟರು.