ಬೆಂಗಳೂರು :ಡಿಜೆಹಳ್ಳಿ ಹಾಗೂ ಕೆಜಿಹಳ್ಳಿಯಲ್ಲಿ ಕಳೆದ ವರ್ಷ ನಡೆದ ಗಲಭೆಯಲ್ಲಿ ವಾಹನ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಆರೋಪಿಗಳಿಂದಲೇ ನಷ್ಟ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾ.ಕೆಂಪಣ್ಣ ನೇತೃತ್ವದ ಕ್ಲೈಮ್ ಕಮೀಷನ್ ಗಲಭೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಗಲಭೆ ಸಂಬಂಧ ಈವರೆಗೆ ದಾಖಲಾದ ಪಿಟಿಷನ್ಗಳು, ಹಾನಿ ಪ್ರಮಾಣ, ಏನೆಲ್ಲಾ ಹಾನಿಯಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ಗೆ ಕ್ಲೈಮ್ ಕಮೀಷನ್ ವರದಿ ಸಲ್ಲಿಸಿದೆ. ಗಲಭೆಯಲ್ಲಿ ಸಾವಿರಾರು ಜನರ ವಾಹನ ಹಾಗೂ ಆಸ್ತಿಪಾಸ್ತಿಗೆ ಧಕ್ಕೆ ಉಂಟಾದರೂ ಸಾರ್ವಜನಿಕರು ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು 90 ಮಂದಿ ಮಾತ್ರ.
ಗಲಭೆಯಲ್ಲಿ 28 ಸರ್ಕಾರಿ ವಾಹನಗಳಿಗೆ ಹಾನಿಯಾಗಿವೆ. 20 ಮಂದಿ ಸಾರ್ವಜನಿಕರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸರ್ಕಾರಿ ಅಧಿಕಾರಿಗಳಿಗೆ ಸೇರಿದ 27 ಖಾಸಗಿ ವಾಹನಗಳು ಡ್ಯಾಮೇಜ್ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ 10 ಮನೆಗಳಿಗೆ ಧಕ್ಕೆಯಾಗಿವೆ. 4 ಸರ್ಕಾರಿ ಸ್ವತ್ತುಗಳಿಗೆ ಸೇರಿದ ಆಸ್ತಿ ಡ್ಯಾಮೇಜ್ ಆಗಿದೆ. ಗಲಭೆಯಲ್ಲಿ ಒಟ್ಟು 4.49 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾದರೆ 103 ವಾಹನಗಳು ಗಲಭೆಗೆ ಆಹುತಿಯಾಗಿವೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
ನಷ್ಟ ಪರಿಹಾರ ಕೋರಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅರ್ಜಿ ಸಲ್ಲಿಸಿದ್ದು, ಕಾವಲ್ ಬೈರಸಂದ್ರದಲ್ಲಿರುವ 80 ಲಕ್ಷ ರೂ. ಮೌಲ್ಯದ ಮನೆ ಹಾಗೂ 20 ಲಕ್ಷ ರೂ. ಮೌಲ್ಯದ 5 ಕಾರುಗಳಿಗೆ ಡ್ಯಾಮೇಜ್ ಆಗಿದೆ. ಒಟ್ಟು 1.1 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ಹಾನಿ ಬಗ್ಗೆ ಕ್ಲೈಮ್ಸ್ ಕಮೀಷನರ್ಗೆ ಶಾಸಕರು ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರ ಪೈಕಿ ಪವನ್ ಕುಮಾರ್ ಎಂಬುವರಿಗೆ ಅತಿ ಹೆಚ್ಚು ನಷ್ಟವಾಗಿರುವುದು ಕಂಡು ಬಂದಿದೆ. ಬರೋಬ್ಬರಿ 1.86 ಕೋಟಿ ರೂ. ನಷ್ಟವಾಗಿದೆ. ದುರ್ಘಟನೆಯಲ್ಲಿ ಎರಡು ಕಾರು, 5 ಲಕ್ಷ ರೂ. ನಗದು, ಚಿನ್ನ-ಬೆಳ್ಳಿ, ಲಕ್ಷಾಂತರ ರೂಪಾಯಿಯ ಬಟ್ಟೆಗಳು ಬೆಂಕಿ ಪಾಲಾಗಿತ್ತು. ಆಸ್ತಿ-ಪಾಸ್ತಿ ಪತ್ರಗಳು ಸಹ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಕೆಎಸ್ಆರ್ಪಿಗೆ ಸೇರಿದ 8 ಲಕ್ಷ ರೂ. ಮೌಲ್ಯದ ವಾಹನಗಳು ಅದರಲ್ಲಿದ್ದ ಗನ್, ಶೆಲ್ಗಳು ಸುಟ್ಟು ಕರಕಲಾಗಿತ್ತು ಎಂದು ಕೆಎಸ್ಆರ್ಪಿ ಆಧಿಕಾರಿಗಳು ಅರ್ಜಿಯಲ್ಲಿ ತಿಳಿಸಿದ್ದಾರೆ. ಗಲಭೆಯಲ್ಲಿ ಆದ ಹಾನಿ ಬಗ್ಗೆ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗವು ಈಗಾಗಲೇ ಕಟ್ಟಡಗಳ ಹಾನಿ, ಆಸ್ತಿ-ಪಾಸ್ತಿ, ವಾಹನಗಳ ಹಾನಿ ಬಗ್ಗೆ ವರದಿ ನೀಡಿದೆ. ಇನ್ನು, ನಗದು, ಚಿನ್ನ-ಬೆಳ್ಳಿ, ದಾಖಲೆ ಪತ್ರಗಳ ಹಾನಿ ಬಗ್ಗೆ ತನಿಖೆ ನಡೆಸುತ್ತಿದೆ.
ಹಾನಿಗೊಳಗಾದ ಪ್ರತಿಯೊಂದರ ಮೌಲ್ಯಮಾಪನ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನ ಸಂಗ್ರಹಿಸಿರುವ ಆಯೋಗವು ಹಾನಿಗೊಳಗಾದ ಜನರು ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸೂಕ್ತ ದಾಖಲಾತಿ ಸಲ್ಲಿಸಬಹುದಾಗಿದೆ.
ಓದಿ:ರಾಜಧಾನಿ ಗಲಭೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಎನ್ಐಎಗೆ ಹೈಕೋರ್ಟ್ ನಿರ್ದೇಶನ