ಬೆಂಗಳೂರು : ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಹ್ಯಾಕ್ ಆದ ಮಾತ್ರಕ್ಕೆ ತಂತ್ರಜ್ಞಾನಕ್ಕೆ ನಿರ್ಬಂಧ ಹೇರಲಾಗದು. ನಾವು ಮುಂದೆ ಸಾಗಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಇ-ಇನಿಶಿಯೇಟಿವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕೆಲವು ಹೈಕೋರ್ಟ್‌ಗಳು ವಿಡಿಯೋ ಕಾನ್ಫರೆನ್ಸ್ ನಿಯಮಗಳನ್ನು ಅಳವಡಿಸಿಕೊಂಡಿವೆ. ಕೆಲ ಹೈಕೋರ್ಟ್‌ಗಳು ಷರತ್ತುಗಳನ್ನು ವಿಧಿಸಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ವಿಡಿಯೋ ಹಾಕುವ ಮೂಲಕ ದತ್ತಾಂಶ ಹ್ಯಾಕ್ ಮಾಡಲಾಗಿತ್ತು ಎಂಬುದು ತಿಳಿದಿದೆ. ಇದರಿಂದ ವಿಚಲಿತರಾಗಿದ್ದೆವು. ಆದರೆ, ನಾವು ಮುಂದೆ ಸಾಗಬೇಕಿದೆ. ಇಂತಹ ಘಟನೆಯಾದ ಮಾತ್ರಕ್ಕೆ ನಾವು ತಂತ್ರಜ್ಞಾನವನ್ನು ನಿರ್ಬಂಧಿಸಲಾಗದು. ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಏನಾದರೂ ಸಮಸ್ಯೆಯಾದರೆ ಅದನ್ನು ಪರಿಹರಿಸಬೇಕು ಎಂದರು.
ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್‌ನ ಕ್ಲಿಪ್‌ಗಳನ್ನು ಆನ್‌ಲೈನ್‌ನಲ್ಲಿ ನೀವು ನೋಡಿರುತ್ತೀರಿ. ಇದನ್ನು ನಾವು ಒಪ್ಪಿಕೊಳ್ಳಬೇಕಿದೆ. ಪ್ರತಿ ತಕ್ಷಣವೂ ನಮ್ಮ ಮೇಲೆ ನಿಗಾ ಇಟ್ಟಿರಲಾಗುತ್ತದೆ. ನಮ್ಮನ್ನು ವಿಡಿಯೋ, ಆಡಿಯೋ ರೆಕಾರ್ಡ್ ಮಾಡಲಾಗುತ್ತಿರುತ್ತದೆ. ಎನ್‌ಐಸಿ ಕ್ಲೌಡ್ ಸಿಸ್ಟಂಗೆ ವರ್ಗಾವಣೆಯಾಗುವಾಗ ಅದು ತಪ್ಪಲಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕದ ನ್ಯಾಯಾಂಗವು 1,69,46,085 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ನ್ಯಾಯಮೂರ್ತಿಗಳು ತಂತ್ರಜ್ಞಾನವನ್ನು ಹೆಚ್ಚು ತಿಳಿದುಕೊಂಡರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು. ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಬಾಕಿ ಪ್ರಕರಣಗಳು ಇವೆ ಎಂಬುದರ ಮೇಲೆ ನಿಗಾ ಇಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದರು.