ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಬಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 23 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ ಕಂಟ್ರಾಕ್ಟರ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ:ಅಕ್ಟೋಬರ್ 7 ರಂದು ದೌರ್ಜನ್ಯಕ್ಕೊಳಗಾದ ಯುವತಿ ಸೇರಿ ಆಕೆಯ ಸ್ನೇಹಿತೆಯರು ಚರ್ಚ್ ಸ್ಟ್ರೀಟ್ ಬಳಿ ಊಟಕ್ಕಾಗಿ ಬಂದಿದ್ದರು. ಊಟ ಮುಗಿಸಿ ತಡರಾತ್ರಿಯಾಗಿದ್ದರಿಂದ ಮನೆಗೆ ಹೋಗಲು ಓಲಾ ಆಟೊ ಬುಕ್ ಮಾಡಿ ಕಾಯುವಾಗ ಆರೋಪಿ ಏಕಾಏಕಿ ಬಂದು ಯುವತಿಯನ್ನು ಹಿಡಿದು ಆಕೆಯನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಆತಂಕಕ್ಕೊಳಗಾದ ಯುವತಿ ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಪರಿಶೀಲಿಸಿ ಆರೋಪಿ ಮಧುಸೂದನ್ನನ್ನು ಬಂಧಿಸಿದ್ದರು. ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ಈ ವ್ಯಕ್ತಿ ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್ ಆಗಿದ್ದ. ಇತ್ತೀಚೆಗೆ ಕೆಂಗೇರಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ. ಅಕ್ಟೋಬರ್ 7 ರಂದು ರೆಸಿಡೆನ್ಸಿ ರೋಡ್ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ಗೆ ಬಂದು ಮದ್ಯಸೇವಿಸಿದ್ದ. ಅಂದು ತಡರಾತ್ರಿ ಚರ್ಚ್ ಸ್ಟ್ರೀಟ್ ಬಳಿ ಊಟಕ್ಕಾಗಿ ಬಂದಾಗ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.